ಭಾನುವಾರ, ನವೆಂಬರ್ 27, 2022
23 °C

ಈ ಚುನಾವಣೆ ಗುಜರಾತ್‌ನ ಮುಂದಿನ 25 ವರ್ಷವನ್ನು ನಿರ್ಧರಿಸುತ್ತದೆ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಈ ಬಾರಿಯ ವಿಧಾನಸಭೆ ಚುನಾವಣೆ ಗುಜರಾತ್‌ನ ಮುಂದಿನ 25 ವರ್ಷಗಳ ಹಣೆಬರಹವನ್ನು ನಿರ್ಧರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಬನಾಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಎಂಬಲ್ಲಿ ನಡೆದ ಬಿಜೆಪಿಯ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈವರೆಗೆ ಗುಜರಾತ್‌ ಹಾಗೂ ಕೇಂದ್ರ ಸರ್ಕಾದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದನ್ನು ಈಗ ಅದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಮಯ ಬಂದಿದೆ‘ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಯಾರು ಶಾಸಕರಾಗುತ್ತಾರೆ? ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂದು ನಿರ್ಧರಿಸಲು ಈ ಚುನಾವಣೆ ನಡೆಯುತ್ತಿಲ್ಲ. ಗುಜರಾತ್‌ನ ಮುಂದಿನ 25 ವರ್ಷದ ಭವಿಷ್ಯ ನಿರ್ಧರಿಸಲು ಈ ಚುನಾವಣೆ ನಡೆಯುತ್ತಿದೆ‘ ಎಂದು ಅವರು ಹೇಳಿದ್ದಾರೆ.

’ಈವರೆಗೆ ಮಾಡಿಕೊಂಡು ಬಂದಿರುವ ಅಭಿವೃದ್ಧಿ ಕಾಮಗಾರಿಗಳನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಮಯ ಬಂದಿದೆ. ಇದಕ್ಕಾಗಿ ಬಲಿಷ್ಠ ಸರ್ಕಾರ ರಚನೆ ಮಾಡಲು ನನಗೆ ನಿಮ್ಮ ಬೆಂಬಲ ಬೇಕು. ನಿಮ್ಮ ಸಮಸ್ಯೆಗಳು ಏನು ಎಂದು ನನಗೆ ನೀವು ಹೇಳುವ ಅಗತ್ಯ ಇಲ್ಲ. ಯಾಕೆಂದರೆ ನಾನು ಇಲ್ಲಿಯೇ ಹುಟ್ಟಿ ಬೆಳೆದವನು. ಬನಾಸ್‌ಕಾಂತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ‘ ಎಂದು ಮೋದಿ ಹೇಳಿದ್ದಾರೆ.

ಗುಜರಾತ್‌ನ ಬಿಜೆಪಿ ಸರ್ಕಾರವು ಪ್ರವಾಸೋದ್ಯಮ, ಪರಿಸರ, ನೀರು, ಹೈನುಗಾರಿಕೆ ಹಾಗೂ ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಅತೀ ಕಡಿಮೆ ಅವಧಿಯಲ್ಲಿ ನಾವು ನೀರು ಮತ್ತು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿದ್ದೇವೆ. 20–25 ವರ್ಷದ ಈಗಿನ ಯುವಕರಿಗೆ ಕೆಲ ದಶಕಗಳ ಹಿಂದೆ ಇದ್ದ ಕೆಟ್ಟ ಸನ್ನಿವೇಶದ ಬಗ್ಗೆ ಈಗ ಗೊತ್ತಿರಲಿಕ್ಕಿಲ್ಲ‘ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು