ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಚುನಾವಣೆ: ದಕ್ಷಿಣ ಗುಜರಾತ್: ಬಿಜೆಪಿ ನೆಲೆ ಸಡಿಲ?

Last Updated 22 ನವೆಂಬರ್ 2022, 20:49 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಗುಜರಾತ್‌ನ ಜಿಲ್ಲೆಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ನೆಲೆ ಸಡಿಲವಾಗುವ ಸಾಧ್ಯತೆಗಳು ಇವೆ. ರಾಜ್ಯದ ರಾಜಕಾರಣಕ್ಕೆ ಹೊಸದಾಗಿ ಪ್ರವೇಶಿಸಿರುವ ಎಎಪಿ ಮತ್ತು ಸರ್ಕಾರದ ಬಗ್ಗೆ ಈ ಭಾಗದ ಬುಡಕಟ್ಟು ಜನರಿಗೆ ಇರುವ ಅಸಮಾಧಾನಗಳು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇವೆ ಎಂದು ವಿಶ್ಲೇಷಿಸಲಾಗಿದೆ.

ದಕ್ಷಿಣ ಗುಜರಾತ್‌ನ ಭರೂಚ್, ನರ್ಮದಾ, ತಾಪಿ, ದಂಗ್‌, ವಲಸಾಡ್, ಸೂರತ್ ಮತ್ತು ನವಸಾರಿ ಜಿಲ್ಲೆಗಳಲ್ಲಿ ಒಟ್ಟು 35 ವಿಧಾನಸಭಾ ಕ್ಷೇತ್ರಗಳಿವೆ. 2017ರ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಈ 35ರಲ್ಲಿ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಉಳಿದ ಹತ್ತರಲ್ಲಿ ಎಂಟು ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತು ಎರಡು ಕ್ಷೇತ್ರಗ
ಳನ್ನು ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಗೆದ್ದುಕೊಂಡಿತ್ತು. ಪ್ರಸಕ್ತ ಚುನಾವಣೆಯಲ್ಲಿ ಈ ಸಂಖ್ಯಾಬಲ ಬದಲಾಗಲಿದೆ ಎಂಬ ಅಂದಾಜು ಇದೆ.

ಈ ಜಿಲ್ಲೆಗಳಲ್ಲಿರುವ ಒಟ್ಟು 35 ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಕ್ಕೆ 14 ಕ್ಷೇತ್ರಗಳನ್ನು ಮೀಸಲಿರಿಸಲಾಗಿದೆ. 2017ರ ಚುನಾವಣೆಯಲ್ಲಿ ಬಿಜೆಪಿಯು ಇವುಗಳಲ್ಲಿ ಏಳು ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಜಿಲ್ಲೆಗಳ ಬುಡಕಟ್ಟು ಮತ್ತು ಅರಣ್ಯ ಪ್ರದೇಶಗಳಲ್ಲಿ ನಡೆಸಿದ ಹಾಗೂ ನಡೆಸಲು ಉದ್ದೇಶಿಸಿದ್ದ ವಿವಿಧ ಯೋಜನೆಗಳೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ನವಸಾರಿ ಮತ್ತು ವಲಸಾಡ್ ಜಿಲ್ಲೆಗಳ ಬುಡಕಟ್ಟು ಪ್ರದೇಶವನ್ನು ಹಾದುಹೋಗುವಂತೆ ರಾಜ್ಯ ಸರ್ಕಾರವು ಹೆದ್ದಾರಿ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಗೆ ಸಾವಿರಾರು ಹೆಕ್ಟೇರ್‌ಗಳಷ್ಟು ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು. ತಮ್ಮ ಜಮೀನು ಕಳೆದುಕೊಳ್ಳುವುದರ ವಿರುದ್ಧ ಇಲ್ಲಿನ ಬುಡಕಟ್ಟು ಜನರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಈ ಹೋರಾಟವನ್ನು ಮುನ್ನಡೆಸಿದ್ದು ಕಾಂಗ್ರೆಸ್‌. ಯೋಜನೆ ಸ್ಥಗಿತವಾದದ್ದು ಸದ್ಯದ ಮಟ್ಟಿಗಷ್ಟೇ ಆಗಿದ್ದರೂ, ಬುಡಕಟ್ಟು ಜನರನ್ನು ರಾಜ್ಯದ ಬಿಜೆಪಿ ವಿರುದ್ಧ ಆ ಹೋರಾಟ ಸಂಘಟಿಸಿದೆ. ಕಳೆದ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದ ಬುಡಕಟ್ಟು ಸಮುದಾಯದ ಕೆಲವು ಮಂದಿ, ಈ ಬಾರಿ ಕಾಂಗ್ರೆಸ್‌ನತ್ತ ಬರುವ ಅಥವಾ ಬಿಟಿಪಿಗೆ ಮತ ಹಾಕುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಪಾರ್–ತಾಪಿ–ನರ್ಮದಾ ನದಿ ಜೋಡಣೆ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿತ್ತು. ಈ ಯೋಜನೆಯಿಂದ ಬುಡಕಟ್ಟು ಸಮುದಾಯದ ಜನರು ಲಕ್ಷಾಂತರ ಹೆಕ್ಟೇರ್‌ ಜಮೀನು ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಇದರ ವಿರುದ್ಧ ಕಾಂಗ್ರೆಸ್‌ನ ಬುಡಕಟ್ಟು ಮೋರ್ಚಾ ನಾಯಕ ಮತ್ತು ಶಾಸಕ ಅನಂತ್ ಪಟೇಲ್‌ ಹೋರಾಟ ಸಂಘಟಿಸಿದ್ದರು. ಸರ್ಕಾರವು ಯೋಜನೆಯನ್ನು ರದ್ದುಪಡಿಸಿತು. ಆದರೆ, ಅದರಿಂದ ಬಿಜೆಪಿಗೆ ಹೆಚ್ಚಿನ ಅನುಕೂಲ ಏನೂ ಆಗುವುದಿಲ್ಲ ಎನ್ನುತ್ತಾರೆ ರಾಜ್ಯ ಕಾಂಗ್ರೆಸ್‌ ನಾಯಕ ತುಷಾರ್ ಚೌಧರಿ.

ಸೂರತ್‌ ಬಿಜೆಪಿಯ ಭದ್ರಕೋಟೆ. ಜಿಲ್ಲೆಯಲ್ಲಿ 16 ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರ ಗಳನ್ನು ಗೆದ್ದುಕೊಂಡಿತ್ತು. ಆದರೆ 2017ರಿಂದ 2022ರ ಮಧ್ಯೆ ಪರಿಸ್ಥಿತಿ ಬದಲಾಗಿದೆ. 2017ರಲ್ಲಿ ಜಿಎಸ್‌ಟಿ ಜಾರಿಯಿಂದ ಜವಳಿ ಉದ್ಯಮಿಗಳಿಗೆ ಭಾರಿ ಹೊಡೆತ ಬಿದ್ದಿದ್ದರೂ, ಆ ಜನರು ಬಿಜೆಪಿಯ ಕೈಹಿಡಿದಿದ್ದರು. ಪಾಟೀದಾರ್ ಮೀಸಲಾತಿ ಹೋರಾಟ ಜೋರಾಗಿದ್ದರೂ, ಪಾಟೀದಾರರು ಬಿಜೆಪಿಯಿಂದ ದೂರ ಸರಿದಿರಲಿಲ್ಲ.

ಆದರೆ, 2021ರಲ್ಲಿ ಸೂರತ್‌ ನಗರಸಭೆಗೆ ನಡೆದ ಚುನಾವಣೆಯಲ್ಲಿ ಎಎಪಿ 27 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 28ರಷ್ಟು ಮತಗಳನ್ನು ಎಎಪಿ ಪಡೆದುಕೊಂಡಿತ್ತು. ಪಾಟೀದಾರ್‌ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರು ಈಗ ಎಎಪಿಯಲ್ಲಿದ್ದಾರೆ. ಎಎಪಿ ಅವರನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಪಾಟೀದಾರ್ ಮತಗಳು ಎಎಪಿಯತ್ತ ವಾಲಲಿವೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT