ಗುರುವಾರ , ಡಿಸೆಂಬರ್ 8, 2022
18 °C
ವಿದ್ಯುತ್ ಉತ್ಪಾದಿಸಿ ಹಣ ಗಳಿಸುವ ಸಮಯ ಬಂದಿದೆ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ವಿದ್ಯುತ್‌ನಿಂದ ಗಳಿಕೆ ಕಲೆ ಗೊತ್ತು-ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೋಡಾಸಾ (ಗುಜರಾತ್) (ಪಿಟಿಐ): ಗುಜರಾತ್ ಜನರಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಕಟಿಸಿರುವುದನ್ನು ತೀವ್ರವಾಗಿ ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ವಿದ್ಯುತ್ ಉಚಿತವಾಗಿ ಪಡೆಯುವ ಬದಲು, ವಿದ್ಯುತ್‌ನಿಂದ ಜನರು ಹಣ ಗಳಿಸುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.

ಮೋಡಾಸಾದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್‌ ಉತ್ಪಾದಿಸಿ ಹಣ ಗಳಿಸುವ ಕಲೆ ತಮಗೆ ಮಾತ್ರ ಗೊತ್ತಿದೆ ಎಂದು ಹೇಳಿದ್ದಾರೆ. ‘ಒಡೆದು ಆಳುವ ನೀತಿಯಲ್ಲಿ ಕಾಂಗ್ರೆಸ್ ಪಕ್ಷ ನಂಬಿಕೆ ಇರಿಸಿದ್ದು, ಅಧಿಕಾರದಲ್ಲಿ ಇರುವುದು ಹೇಗೆ ಎಂಬ ಬಗ್ಗೆಯೇ ಸದಾ ಗಮನ ಹರಿಸುತ್ತದೆ. ಉಚಿತ ವಿದ್ಯುತ್ ನೀಡುವ ತಂತ್ರವನ್ನು ಕರಗತ ಮಾಡಿಕೊಂಡ ಏಕೈಕ ರಾಜಕಾರಣಿ ತಾವು ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಹಲವು ಬಾರಿ ಹೇಳಿದ್ದಾರೆ. ಉಚಿತ ವಿದ್ಯುತ್‌ ಪಡೆಯುವುದರ ಬದಲು, ಗುಜರಾತ್‌ನ ಜನರು ಸೌರ ಫಲಕಗಳನ್ನು ಅಳವಡಿಸಿಕೊಂಡು, ಅದರಲ್ಲಿ
ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ತನ್ನು ಮಾರಾಟ ಮಾಡಿ ಹಣ ಗಳಿಸುವುದನ್ನು ನಾನು ನೋಡಲು ಬಯಸುತ್ತೇನೆ’ ಎಂದು ಪ್ರಧಾನಿ ಹೇಳಿದ್ದಾರೆ. 

‘ಮಹಾರಾಷ್ಟ್ರದ ಮೊಧೆರಾ ಗ್ರಾಮವು ಸೌರಶಕ್ತಿ ವ್ಯವಸ್ಥೆ ಅಳವಡಿಸಿಕೊಂಡಿದೆ. ಗ್ರಾಮದ ಜನರು ತಮಗೆ ಅಗತ್ಯವಿದ್ದಷ್ಟು ವಿದ್ಯುತ್ ಬಳಸಿಕೊಂಡು, ಉಳಿದದ್ದನ್ನು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇಡೀ ಗುಜರಾತ್‌ನಲ್ಲಿ ಈ ವ್ಯವಸ್ಥೆ ಬರಬೇಕು ಎಂಬುದು ನನ್ನ ಬಯಕೆಯಾಗಿದೆ. ರೈತರೂ ತಮ್ಮ ಜಮೀನುಗಳಲ್ಲಿ ಸೌರಫಲಕ ಅಳವಡಿಸಿ, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಬಹುದು’ ಎಂದು ಮೋದಿ ಹೇಳಿದರು. 

ಗಾಂಧಿನಗರದ ದೆಹಗಾಂವ್‌ ಪಟ್ಟಣದಲ್ಲಿ ಮತ್ತೊಂದು ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಬಿಜೆಪಿ ಸರ್ಕಾರ ಪರಿವರ್ತನೆ ತಂದಿದೆ ಎಂದು ಹೇಳಿದರು. ಗುಣಮಟ್ಟದ ಶಿಕ್ಷಣವನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿರುವ ಎಎಪಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. ಗುಜರಾತ್‌ನ ಶೈಕ್ಷಣಿಕ ಬಜೆಟ್ ₹33 ಸಾವಿರ ಕೋಟಿಗೆ ತಲುಪಿದ್ದು, ಕೆಲವು ರಾಜ್ಯಗಳ ಒಟ್ಟಾರೆ ಬಜೆಟ್‌ ಸಹ ಇಷ್ಟು ದೊಡ್ಡದಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಶಪಿಸುವುದನ್ನು ಬಿಡಿ: ಖರ್ಗೆ

ನವದೆಹಲಿ: ಗುಜರಾತ್ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಾಂಗ್ರೆಸ್‌ ಪಕ್ಷವನ್ನು ಶಪಿಸುವುದನ್ನು ನಿಲ್ಲಿಸಿ, ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಮಾತನಾಡಲಿ’ ಎಂದು ಸಲಹೆ ನೀಡಿದ್ದಾರೆ.

‘ಕಾಂಗ್ರೆಸ್ ಪಕ್ಷ ವಂಶಾಡಳಿತ, ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ’ ಎಂದಿದ್ದ ಪ್ರಧಾನಿ ಟೀಕೆಗೆ ತಿರುಗೇಟು ನೀಡಿರುವ ಖರ್ಗೆ, ಗುಜರಾತ್‌ನ ಪರಿಸ್ಥಿತಿಯ ಬಗ್ಗೆ ಮಾತನಾಡಿ ಎಂದಿದ್ದಾರೆ.

‘ಗುಜರಾತ್‌ನ ಮಕ್ಕಳ ಭವಿಷ್ಯವನ್ನು ಏಕೆ ನಾಶಪಡಿಸಲಾಯಿತು. ಕಡಿಮೆ ತೂಕದ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಗುಜರಾತ್‌ನಲ್ಲಿ ಏಕೆ ಹೆಚ್ಚಿದ್ದಾರೆ. 30 ರಾಜ್ಯಗಳ ಶ್ರೇಯಾಂಕದಲ್ಲಿ ಗುಜರಾತ್‌ 29ನೇ ಸ್ಥಾನ ಪಡೆದಿರುವುದು ಏಕೆ. ನವಜಾತ ಶಿಶು ಮರಣದಲ್ಲಿ ರಾಜ್ಯ 19ನೇ ರ್‍ಯಾಂಕ್ ಪಡೆದಿರುವುದು ಏಕೆ’ ಎಂಬುದಕ್ಕೆ ಪ್ರಧಾನಿ ಉತ್ತರಿಸಲಿ ಎಂದಿದ್ದಾರೆ. 

‘ಬಿಜೆಪಿಗೆ ಮತ ಹಾಕಬೇಡಿ’

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬಾರದು ಎಂದು ಗುಜರಾತ್‌ನ ಮಾಲಧಾರಿ ಸಮುದಾಯ ಕರೆ ಕೊಟ್ಟಿದೆ. ಗುಜರಾತ್‌ ಮಾಲಧಾರಿ ಮಹಾಪಂಚಾಯಿತಿಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಸಮುದಾಯದ 60 ಲಕ್ಷ ಮತದಾರರಿದ್ದಾರೆ. ಒಂದೂವರೆ ವರ್ಷದಿಂದ ಸಮುದಾಯದ ಜನರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಹಲವು ಬೇಡಿಕೆಗಳು ಈಡೇರದೆ ಹಾಗೆಯೇ ಉಳಿದಿವೆ. ಈ ಬಾರಿ ಬಿಜೆಪಿಗೆ ಪಾಠ ಕಲಿಸುತ್ತೇವೆ’ ಎಂದು ಸಮುದಾಯದ ಮುಖಂಡ ನಾಗ್ಜಿ ದೇಸಾಯಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು