ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ತೃಪ್ತಿಕರವಾಗಿಲ್ಲ: ಗುಜರಾತ್‌ ಸರ್ಕಾರಕ್ಕೆ ಕೋರ್ಟ್ ತರಾಟೆ

Last Updated 27 ಏಪ್ರಿಲ್ 2021, 21:18 IST
ಅಕ್ಷರ ಗಾತ್ರ

ಹಮದಾಬಾದ್‌: ‘ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಗುಜರಾತ್ ಸರ್ಕಾರದ ಕಾರ್ಯವೈಖರಿ ತೃಪ್ತಿಕರವಾಗಿಲ್ಲ’ ಎಂದು ಹೈಕೋರ್ಟ್‌ ಅಸಾಮಾಧಾನ ವ್ಯಕ್ತಪಡಿಸಿದೆ. ‘ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಇದೆ. ಚಿಕಿತ್ಸೆಯಿಲ್ಲದೇ ಆಸ್ಪತ್ರೆಯ ಹೊರಗೆ ರೋಗಿಗಳು ಸಾಯುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡಿದೆ.

ಲಾಕ್‌ಡೌನ್‌ ಜಾರಿ ಮಾಡಬಾರದು ಎಂದು ಸಲಹೆ ನೀಡಿರುವ ಹೈಕೋರ್ಟ್‌, ಕೋವಿಡ್‌ ವಿರುದ್ಧ ಹೋರಾಟ ನಡೆಸಲು ಲಾಕ್‌‌ಡೌನ್‌ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದೆ.

‘108’ ಆಂಬುಲೆನ್ಸ್‌‌ಗಳು ಕರೆತರುವ ರೋಗಿಗಳಷ್ಟೇ ಅಲ್ಲ, ಆಸ್ಪತ್ರೆಗೆ ಬರುವ ಎಲ್ಲ ಕೋವಿಡ್‌ ಪೀಡಿತರನ್ನು ದಾಖಲಿಸಿಕೊಳ್ಳುವಂತೆ ಆಸ್ಪತ್ರೆ ಆಡಳಿತಗಳಿಗೆ ನಿರ್ದೇಶನ ನೀಡಬೇಕು ಎಂದು ಗುಜರಾತ್‌ ಸರ್ಕಾರಕ್ಕೆ ಸಲಹೆ ನೀಡಿದೆ.

‘ಸರ್ಕಾರ ಅಥವಾ ಅಹಮದಾಬಾದ್‌ ನಗರಪಾಲಿಕೆ ಏನೂ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ, ಅವುಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ, ಪಾರದರ್ಶಕವಾಗಿಯೂ ಇಲ್ಲ.ಇದೇ ಕಾರಣದಿಂದ ಎಲ್ಲ ಸಮಸ್ಯೆಗಳು ಉದ್ಭವಿಸಿವೆ’ ಮುಖ್ಯನ್ಯಾಯಮೂರ್ತಿ ವಿಕ್ರಂ ನಾಥ ಮತ್ತು ನ್ಯಾಯಮೂರ್ತಿ ಬಿ.ಸಿ.ಕಾರಿಯಾ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಗುಜರಾತ್‌ನಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಕುರಿತಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್‌ ಈ ನಿಲುವು ವ್ಯಕ್ತಪಡಿಸಿದೆ. ಹೆಚ್ಚು ಕ್ರಿಯಾತ್ಮಕವಾದ, ಚಿಂತನಾರ್ಹವಾದ ಮತ್ತು ಅರ್ಥಪೂರ್ಣವಾದ ವ್ಯವಸ್ಥೆಯನ್ನು ಹೊಂದಿದ್ದರೆ, ಚೆನ್ನಾಗಿ ಕೆಲಸ ಆಗುತ್ತಿದ್ದು, ಬಿಕ್ಕಟ್ಟು ಕಡಿಮೆ ಇರುತ್ತಿತ್ತು ಎಂದು ನೇರ ಮಾತುಗಳಲ್ಲಿ ಹೇಳಿತು.

ಅಕಾಲಿಕ ಮತ್ತು ದುರದೃಷ್ಟಕರವಾದ ಸಾವುಗಳು ಆಸ್ಪತ್ರೆಯ ಹೊರಗಡೆ ಸಂಭವಿಸುತ್ತಿವೆ. ವೈದ್ಯರು ಗಮನಿಸುತ್ತಿಲ್ಲ ಎಂಬುದೇ ಇದಕ್ಕೆ ಕಾರಣ. ಇಂಥದು ಆಗಬಾರದು. ವೈದ್ಯರೂ ಕೂಡಾ ‘108’ ಆಂಬುಲೆನ್ಸ್‌ನಲ್ಲಿ ಬರದೇ ಇರುವ ರೋಗಿಗಳನ್ನು ನೋಡುವುದಿಲ್ಲ ಎಂದು ಹೇಳಬಾರದು ಎಂದು ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT