ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆತ; ವ್ಯಕ್ತಿಗೆ 18ತಿಂಗಳು ಜೈಲು

ಅಹಮದಾಬಾದ್: 2012ರಲ್ಲಿ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಜಾವೇರಿ ಮೇಲೆ ಚಪ್ಪಲಿ ಎಸೆದ ಪ್ರಕರಣದಡಿ ರಾಜ್‌ಕೋಟ್ ಜಿಲ್ಲೆಯ ಚಹಾ ಮಾರಾಟಗಾರನೊಬ್ಬನಿಗೆ ನ್ಯಾಯಾಲಯವೊಂದು 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಮಿರ್ಜಾಪುರ ಗ್ರಾಮೀಣ ನ್ಯಾಯಾಲಯದ ಸಿಜೆಎಂ ವಿ.ಎ ದಡಾಳ್ ಅವರು,‘ ಭವಾನಿದಾಸ್ ಬಾವಜೀ ಎಂಬುವವರಿಗೆ 18 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದರು.
ಹಲವು ವರ್ಷಗಳಿಂದ ತನ್ನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ಬಗ್ಗೆ ಹತಾಶೆಗೊಂಡು ತಾನು ಹೈಕೋರ್ಟ್ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದಿರುವುದಾಗಿ ಬಾವಜೀ ಪೊಲೀಸರಿಗೆ ತಿಳಿಸಿದ್ದರು.
‘ಈ ರೀತಿಯ ನಡೆ ಅತ್ಯಂತ ಖಂಡನೀಯ. ಭವಾನಿದಾಸ್‌ಗೆ 18 ತಿಂಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದಂಡವನ್ನು ವಿಧಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಿದೆ.
ರಸ್ತೆ ಬದಿಯಲ್ಲಿರುವ ಚಹಾದ ಅಂಗಡಿಯನ್ನು ತೆರವುಗೊಳಿಸುವಂತೆ ಭಯವದಾರ್ ನಗರ ಪಾಲಿಕೆಯು ಭವಾನಿದಾಸ್ ಬಾವಜೀಗೆ ಸೂಚಿಸಿತ್ತು. ಇದಕ್ಕೆ ಗೊಂಡಾಲ್ ಸೆಷನ್ಸ್ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ನಗರ ಪಾಲಿಕೆಯು ಹೈಕೋರ್ಟ್ ಮೊರೆ ಹೋಗಿತ್ತು.
‘ಅಂಗಡಿ ತೆರವುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿ, ನನ್ನ ಚಹಾ ಅಂಗಡಿಯನ್ನು ತೆರವುಗೊಳಿಸಲಾಯಿತು. ಇದರಿಂದಾಗಿ ನಾನು ಉದ್ಯೋಗ ಕಳೆದುಕೊಂಡೆ. ವಿಚಾರಣೆಗೆ ಹಾಜರಾಗಲು ಕೂಡ ಬೇರೆ ಅವರಿಂದ ಹಣ ಪಡೆದು ಅಹಮದಾಬಾದ್‌ಗೆ ಬರಬೇಕಾಗಿತ್ತು. ಬಹಳ ಸಮಯವಾದರೂ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಇದರಿಂದ ಹತಾಶೆಗೊಂಡು ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದೆ’ ಎಂದು ಬಾವಜೀ ತಿಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.