ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರ್ಬಿ ಸೇತುವೆ ಕುಸಿತ: 7 ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Last Updated 4 ಫೆಬ್ರುವರಿ 2023, 9:44 IST
ಅಕ್ಷರ ಗಾತ್ರ

ಮೊರ್ಬಿ: ಗುಜರಾತ್‌ನ ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಆರೋಪಿಗಳಾಗಿರುವ ಒರೆವಾ ಗ್ರೂಪ್‌ನ ಇಬ್ಬರು ನಿರ್ದೇಶಕರು ಸೇರಿದಂತೆ ಒಟ್ಟು ಏಳು ಮಂದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿದೆ.

ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ಕೋರ್ಟ್‌ ನ್ಯಾಯಾದೀಶ ಪಿ.ಸಿ.ಜೋಶಿ ಅವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳು ಇದಕ್ಕೂ ಮುನ್ನ ಸಲ್ಲಿಸಿದ್ದ ಅರ್ಜಿಗಳು ಸಹ ಸೆಷನ್ಸ್‌ ಹಾಗೂ ಹೈಕೋರ್ಟ್‌ಗಳಲ್ಲಿ ತಿರಸ್ಕೃತಗೊಂಡಿವೆ.

135 ಜನರ ಸಾವಿಗೆ ಕಾರಣವಾಗಿದ್ದ ಈ ಸೇತುವೆ ಕುಸಿತ ಪ್ರಕರಣದ ಆರೋಪಪಟ್ಟಿಯನ್ನು ಪೊಲೀಸರು ಜನವರಿ 27ರಂದು ಸಲ್ಲಿಸಿದ್ದರು. ಗಡಿಯಾರ ತಯಾರಿಕೆ ಕಂಪೆನಿ ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಜಯಸುಖ್‌ ಪಟೇಲ್‌ ಅವರನ್ನು ಪ್ರಕರಣದ 10ನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ಎಂ.ಜೆ. ಖಾನ್‌ ಅವರು ಪಟೇಲ್‌ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು.

ಇದರ ಬೆನ್ನಲ್ಲೇ ಪಟೇಲ್‌ ಅವರು ಜನವರಿ 31ರಂದು ಸೆಷನ್ಸ್‌ ನ್ಯಾಯಾಲಯದೆದುರು ಶರಣಾಗಿದ್ದರು. ಅವರನ್ನು ಫೆಬ್ರುವರಿ 8ರ ವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.

ಎಲ್ಲ ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಹಣದ ಆಸೆಗಾಗಿ ಮೊರ್ಬಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಇದು ದುರಂತಕ್ಕೆ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶತಮಾನಗಳಷ್ಟು ಹಳೆಯದಾದ ಮೊರ್ಬಿ ಸೇತುವೆ ನಿರ್ವಹಣೆಯ ಒಪ್ಪಂದವನ್ನು ಒರೆವಾ ಗ್ರೂಪ್‌ ವಹಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT