ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ, ಪಟೇಲರ ಗುಜರಾತನ್ನು ಮರುನಿರ್ಮಾಣ ಮಾಡಬೇಕಿದೆ: ಕಾಂಗ್ರೆಸ್

Last Updated 29 ನವೆಂಬರ್ 2022, 15:12 IST
ಅಕ್ಷರ ಗಾತ್ರ

ನವದೆಹಲಿ: ‘27 ವರ್ಷಗಳ ಕಾಲ ಬಿಜೆಪಿಯು ತನ್ನ ದುರಾಡಳಿತದಿಂದ ಗುಜರಾತ್‌ ಜನರಿಗೆ ವಿಶ್ವಾಸದ್ರೋಹ ಬಗೆದಿದೆ. ಮಹಾತ್ಮಾ ಗಾಂಧಿ ಹಾಗೂ ಸರ್ದಾರ್ ಪಟೇಲರ ನಾಡನ್ನು ಮರುನಿರ್ಮಾಣ ಮಾಡಬೇಕಿದೆ ‘ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

#RejectBJP ಎನ್ನುವ ಹ್ಯಾಶ್‌ ಟ್ಯಾಗ್‌ ಬಳಸಿ ಈ ಇಬ್ಬರು ನಾಯಕರು ಬಿಜೆಪಿ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಹಣದುಬ್ಬರ ಹಾಗೂ ನಿರುದ್ಯೋಗದ ವಿಚಾರ ಪ್ರಸ್ತಾಪಿಸಿರುವ ಖರ್ಗೆ, ಗುಜರಾತ್‌ನ ರೈತರಿಗೆ ಬಿಜೆಪಿ ವಂಚಿಸಿದೆ ಎಂದು ಹೇಳಿದ್ದಾರೆ. ವಿಷಪೂರಿತ ಮದ್ಯ ಸೇವನೆಯಿಂದ ಇಬ್ಬರು ಮೃತಪಟ್ಟಿರುವ ಘಟನೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮದ್ಯ ನಿಷೇಧ ಇರುವ ಜಿಲ್ಲೆಯಲ್ಲಿ, ಮದ್ಯ ಸೇವಿಸಿ ನಿನ್ನೆ ಇಬ್ಬರು ಮೃತಪಟ್ಟಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ಮದ್ಯ ನಿಷೇಧ ಇದೆ ಎಂದು ಕೊಚ್ಚಿಕೊಳ್ಳುತ್ತಾರೆ. ಇನ್ನೊಂದು ಕಡೆ ಮದ್ಯ, ಡ್ರಗ್ಸ್‌ ಸೇವನೆಯಿಂದಾಗಿ ಜನ ಸಾವಿಗೀಡಾಗುತ್ತಿದ್ದಾರೆ. ಉದ್ಯೋಗ ನೀಡುವ ಬದಲು ಸರ್ಕಾರ ಜನರಿಗೆ ವಿಷ ನೀಡುತ್ತಿದೆ. ಇದು ಬಿಜೆಪಿಯ ಗುಜರಾತ್‌ ಮಾಡೆಲ್. ಗಾಂಧಿ ಹಾಗೂ ಸರ್ದಾರ್‌ ಅವರ ಭೂಮಿ ಈಗ ಅಮಲಿನ ಸ್ಥಳವಾಗಿದೆ‘ ಎಂದು ಗಾಂಧಿ ಕಿಡಿ ಕಾರಿದ್ದಾರೆ.

‘ಯಾಕೆ ಗುಜರಾತ್‌ನ ಯುವಕರು, ರೈತರು, ಮಹಿಳೆಯರು, ಸಣ್ಣ ಉದ್ಯಮಿಗಳು, ದಲಿತರು, ಬುಡಕಟ್ಟು ಹಾಗೂ ಹಿಂದುಳಿದ ವರ್ಗದವರು ಸೇರಿ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ? ಗುಜರಾತ್‌ನ ಜನರ ಆದಾಯ ಯಾಕೆ ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಕಡಿಮೆ ಇದೆ? ‘ ಎಂದು ಖರ್ಗೆ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ.

ಅಲ್ಲದೇ ಈಗ ಬದಲಾವಣೆಯ ಸಮಯ ಬಂದಿದೆ ಎಂದಿರುವ ಅವರು, ‘27 ವರ್ಷಗಳ ಕಾಲ ದುರಾಡಳಿತ ಮಾಡಿರುವ ಬಿಜೆಪಿಯನ್ನು ಕಿತ್ತು ಬಿಸಾಕಬೇಕಿದೆ. ಮಹಾತ್ಮಾ ಗಾಂಧಿ, ಸರ್ದಾರ್‌ ಪಟೇಲ್‌, ಮೊರಾರ್ಜಿ ದೇಸಾಯಿ, ಚಿಮನ್‌ಭಾಯ್‌ ಪಟೇಲ್‌ ಮುಂತಾದವರ ಗುಜರಾತ್‌ ಅನ್ನು ಮರುನಿರ್ಮಾಣ ಮಾಡಬೇಕಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಗುಜರಾತ್‌ನ ಜನರಲ್ಲಿ ಸಂತಸ ತರಲಿದೆ‘ ಎಂದು ಖರ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT