ಶುಕ್ರವಾರ, ಮೇ 27, 2022
21 °C

ಗುಜರಾತ್: ಕೋವಿಡ್-19 ಲಸಿಕೆ ಪಡೆದ ಎರಡೇ ಗಂಟೆಯಲ್ಲಿ ಪೌರಕಾರ್ಮಿಕ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಕೋವಿಡ್ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ 30 ವರ್ಷದ ಪೌರ ಕಾರ್ಮಿಕರೊಬ್ಬರು ಗುಜರಾತ್‌ನ ವಡೋದರಾದಲ್ಲಿ ಭಾನುವಾರ ಮೃತಪಟ್ಟಿದ್ದು, ಸಾವಿಗೆ ನಿಖರವಾದ ಕಾರಣ ತಿಳಿಯಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದಾರೆ.

ಅವರ ಹಠಾತ್ ಸಾವಿಗೆ ಕೋವಿಡ್-19 ಲಸಿಕೆಯೇ ಕಾರಣವಿರಬಹುದು ಎಂದು ಮೃತರ ಕುಟುಂಬ ಸದಸ್ಯರು ಶಂಕಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, 2016 ರಿಂದ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರಿಂದ ಮತ್ತು ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.

ಮೃತ ಪೌರಕಾರ್ಮಿಕ ಜಿಗ್ನೇಶ್ ಸೋಲಂಕಿ ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ (ವಿಎಂಸಿ) ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಭಾನುವಾರ ಬೆಳಗ್ಗೆ ಅವರಿಗೆ ಲಸಿಕೆ ನೀಡಲಾಗಿತ್ತು. ಆದರೆ, ಕಲವೇ ಗಂಟೆಗಳ ನಂತರ, ಅವರು ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಎಸ್‌ಎಸ್‌ಜಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಲಂಕಿ ಅವರ ಪತ್ನಿ ದಿವ್ಯಾ ಮಾತನಾಡಿ, 'ಅವರು ಲಸಿಕೆ ಹಾಕಿಸಿಕೊಳ್ಳಲು ತೆರಳುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈ ಕುರಿತು ನಾವು ಚರ್ಚೆ ಸಹ ಮಾಡಿರಲಿಲ್ಲ. ಲಸಿಕೆ ಹಾಕಿಸಿಕೊಂಡ ನಂತರ ಮನೆಗೆ ಬಂದಿದ್ದರು. ಮನೆಯಲ್ಲಿ ಮಗಳ ಜೊತೆ ಆಟವಾಡುವಾಗ ಕುಸಿದು ಬಿದ್ದರು. ಅವರ ಹಠಾತ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣವಾಗಿರಬಹುದು' ಎಂದು ಹೇಳಿದ್ದಾರೆ.

ಎಸ್‌ಎಸ್‌ಜಿ ಆಸ್ಪತ್ರೆಯ ಡಾ. ರಂಜನ್ ಐಯ್ಯರ್ ಮಾತನಾಡಿ, ಸೋಲಂಕಿ ಅವರು ಸ್ಥಳೀಯ ಅಡಳಿತ ಸ್ಥಾಪಿಸಿದ್ದ ಬೂತ್‌ನಲ್ಲಿ ಸೋಲಂಕಿಗೆ ಕೋವಿಡ್-19 ಲಸಿಕೆ ನೀಡಲಾಯಿತು. ಬಳಿಕ ಅರ್ಧ ಗಂಟೆಯವರೆಗೂ ಅವರನ್ನು ಅಲ್ಲಿಯೇ ಮೇಲ್ವಿಚಾರಣೆ ಮಾಡಲಾಯಿತು. ಈ ಅವಧಿಯಲ್ಲಿ ಅವರಿಗೆ ಯಾವುದೇ ಅಡ್ಡಪರಿಣಾಮಗಳ ಲಕ್ಷಣಗಳು ಕಂಡುಬಂದಿರಲಿಲ್ಲ. ಬಳಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದಿದ್ದಾರೆ.

ಸೋಲಂಕಿಯವರು ತಮಗಿರುವ ವೈದ್ಯಕೀಯ ಇತಿಹಾಸವನ್ನು ತಿಳಿಸಿಲ್ಲ ಮತ್ತು ಅವರು ಆ ಸಂಬಂಧ ಔಷಧಗಳನ್ನು ಸೇವಿಸುತ್ತಿದ್ದರು. ಸಾಮಾನ್ಯ ಮಾರ್ಗಸೂಚಿಗಳ ಪ್ರಕಾರ ರೋಗದ ಇತಿಹಾಸ ಹೊಂದಿರುವವರಿಗೆ ಲಸಿಕೆ ನೀಡಬಾರದು ಎಂದಿದೆ ಎಂದು ಅಯ್ಯರ್ ಹೇಳಿದರು.

'ಜಿಗ್ನೇಶ್ ಅವರು ಹೃದ್ರೋಗದ ಇತಿಹಾಸವನ್ನು ಹೊಂದಿದ್ದರೂ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಅವರ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ನಾವು ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆಯಲು ಸಾಧ್ಯವಾಗುತ್ತದೆ' ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು