ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಸಂಸ್ಕೃತಿ ತೋರ್ಪಡಿಕೆಗಷ್ಟೇ: ದಿನೇಶ್‌ ಗುಂಡೂರಾವ್ ಟೀಕೆ

Last Updated 16 ಡಿಸೆಂಬರ್ 2021, 13:08 IST
ಅಕ್ಷರ ಗಾತ್ರ

ಪಣಜಿ: ‘ಬಿಜೆಪಿಯಲ್ಲಿಸಂಸ್ಕೃತಿ ಎಂಬುದು ಕೇವಲ ತೋರ್ಪಡಿಕೆ ಮತ್ತು ಮತಗಳನ್ನು ಸೆಳೆಯಲಷ್ಟೇ ಉಳಿದು ಕೊಂಡಿದೆ’ ಎಂದು ಗೋವಾದಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯಾಗಿರುವ ದಿನೇಶ್‌ ಗುಂಡೂರಾವ್ ಟೀಕಿಸಿದ್ದಾರೆ.

ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪದಡಿ ಗೋವಾದ ನಗರಾಭಿವೃದ್ಧಿ ಸಚಿವ ಮಿಲಿಂದ್ ನಾಯಕ್‌ ರಾಜೀನಾಮೆ ನೀಡಿದ ಘಟನೆ ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿಯೂ ಆ ಪಕ್ಷದ ಕೆಲ ಮುಖಂಡರು ವಿಧಾನಸಭೆಯಲ್ಲಿಯೇ ನೀಲಿಚಿತ್ರ ನೋಡಿ ಸಿಕ್ಕಿಬಿದ್ದಿದ್ದರು ಎಂದು ಹೇಳಿದರು.

‘2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಹಲವರು ನೀಲಿಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿದ್ದರು. ಆ ವಿಡಿಯೊಗಳು ಬಹಿರಂಗ ಆಗಿದ್ದವು. ಎಲ್ಲರೂ ಶುದ್ಧರು ಎಂದು ನಾನು ಹೇಳುವುದಿಲ್ಲ. ಪ್ರತಿಯೊಬ್ಬರಿಗೂ ಒಂದು ಲೋಪ ಇರುತ್ತದೆ. ಆದರೆ, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯು ಇಂತಹವರನ್ನೇ ರಕ್ಷಿಸಲಿದೆ. ಅವರು ಇನ್ನಷ್ಟು ಬಲಗೊಳ್ಳಲು ನೆರವಾಗುತ್ತದೆ. ಇದು, ಬಿಜೆಪಿಯ ಸಮಸ್ಯೆಯೂ ಹೌದು‘ ಎಂದು ದಿನೇಶ್‌ ಪ್ರತಿಕ್ರಿಯಿಸಿದರು.

2012ರಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೇಮಾರ್‌ ವಿಧಾನಸಭೆಯಲ್ಲಿ ನೀಲಿಚಿತ್ರ ನೋಡುತ್ತಿದ್ದಾಗ ಸಿಕ್ಕಿಬಿದ್ದರು. ಇದು, ವಿವಾದಕ್ಕೆ ಕಾರಣವಾಗಿತ್ತು. 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಸವದಿ (ಈಗ ಮಾಜಿ) ಮತ್ತು ಸಿ.ಸಿ.ಪಾಟೀಲ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ಇನ್ನೊಂದೆಡೆ, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ‘ತಮ್ಮ ವಿರುದ್ಧದ ಆರೋಪ ಕುರಿತಂತೆ ಮುಕ್ತ, ನ್ಯಾಯಸಮ್ಮತ ವಿಚಾರಣೆಗೆ ನೆರವಾಗಲು ಸಚಿವರು ರಾಜೀನಾಮೆ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡಿದ್ದರು.

ಇದಕ್ಕೆ ವ್ಯಂಗ್ಯವಾಡಿದ ದಿನೇಶ್‌ ಗುಂಡೂರಾವ್, ‘ಸರ್ಕಾರ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ನಡೆಸುತ್ತದಯೇ? ಇಂತಹ ಎಷ್ಟೊಂದು ಪ್ರಕರಣಗಳಿವೆ. ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT