ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ದಿನಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ 5 ಪ್ರಕರಣಗಳಲ್ಲಿ ಸಿಬಿಐ ತನಿಖೆ

Last Updated 13 ಏಪ್ರಿಲ್ 2022, 10:29 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಡಿಯಾ ಹಂಸಖಾಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯು ಸಾವಿಗೀಡಾದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಬಿಐ ವಿಚಾರಣೆಗೆ ಆದೇಶಿಸಲಾಗಿದೆ. ಕಳೆದ 18 ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಒಟ್ಟು ಐದು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಕೋರ್ಟ್‌ ನಿರ್ದೇಶಿಸಿದೆ.

ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ಕಲ್ಕತ್ತ ಹೈಕೋರ್ಟ್‌ನ ವಿಭಾಗೀಯ ಪೀಠವು ಮಂಗಳವಾರ ಆದೇಶ ಕಾಯ್ದಿರಿಸಿತ್ತು. ಆದರೆ, ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಮಂಗಳವಾರ ಸಂಜೆಯ ವೇಳೆಗೆ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ಆದೇಶದಲ್ಲಿ ತಿಳಿಸಿರುವುದು ಕಂಡು ಬಂದಿದೆ.

ಕಲ್ಕತ್ತ ಹೈಕೋರ್ಟ್‌ನ ವಿಭಾಗೀಯ ಪೀಠಗಳು ಹಾಗೂ ಏಕಸದಸ್ಯ ಪೀಠದಿಂದ ಐದು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.

ಬಿರ್ಭುಮ್‌ ಜಿಲ್ಲೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ 9 ಜನರ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾರ್ಚ್‌ 25ರಂದು ಆದೇಶ, ಪರುಲಿಯಾದ ಕಾಂಗ್ರೆಸ್‌ ಮುಖಂಡ ತಪನ್ ಕಾಂಡು ಹತ್ಯೆ ಪ್ರಕರಣದಲ್ಲಿ ಏಪ್ರಿಲ್‌ 4ರ ಆದೇಶ, ತೃಣಮೂಲ ಕಾಂಗ್ರೆಸ್‌ನ ಮುಖಂಡ ಶೇಖ್‌ ಕೊಲೆ ಪ್ರಕರಣದಲ್ಲಿ ಏಪ್ರಿಲ್‌ 8ರ ಆದೇಶ ಹಾಗೂ ಏಪ್ರಿಲ್‌ 12ರಂದು ತಪನ್‌ ಕಾಂಡು ಕೊಲೆಯ ಪ್ರತ್ಯಕ್ಷ ಸಾಕ್ಷಿ ನಿರಂಜನ್‌ ವೈಷವ್‌ ಅವರ ಆತ್ಮಹತ್ಯೆಯ ಬಗ್ಗೆ ಹಾಗೂ ಹಂಸಖಾಲಿ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಕೋರ್ಟ್‌ ಆದೇಶಿಸಿದೆ.

ರಾಜ್ಯದ ಆಡಳಿತ ಅಥವಾ ಪೊಲೀಸ್‌ ಇಲಾಖೆಯು ಇಂಥ ಪ್ರಕರಣಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ತನಿಖೆ ನಡೆಸಬಹುದು ಎಂಬ ಬಗ್ಗೆ ತಾವು ತಿಳಿದುಕೊಂಡಿರುವ ವಾಸ್ತವಾಂಶ ಆಧರಿಸಿ ವಿಭಾಗೀಯ ಪೀಠಗಳು ಆದೇಶಗಳನ್ನು ನೀಡಿವೆ ಎಂಬುದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಗಂಗೂಲಿ ಅವರ ಅಭಿಪ್ರಾಯ ಎಂದು ಐಎಎನ್ಎಸ್‌ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಗಂಗೂಲಿ ಅವರ ಪ್ರಕಾರ, ರಾಜ್ಯದ ಆಡಳಿತ ಅಥವಾ ರಾ‌ಜ್ಯದ ಪೊಲೀಸ್‌ ಇಲಾಖೆಯು ಪ್ರಕರಣಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ತನಿಖೆ ಕೈಗೊಳ್ಳಬಹುದು ಎಂಬುದರ ಮನವರಿಕೆಯನ್ನು ಆಧರಿಸಿ ವಿಭಾಗೀಯ ಪೀಠಗಳು ಆದೇಶಗಳನ್ನು ನೀಡಿವೆ.

'ಸತ್ಯ-ಶೋಧನೆ'ಗಾಗಿ ಸಮಿತಿ

ಹಂಸಖಾಲಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 'ಸತ್ಯ-ಶೋಧನೆ'ಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಐವರು ಮಹಿಳಾ ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.

ಪಕ್ಷದ ಉಪಾಧ್ಯಕ್ಷೆ ಮತ್ತು ಸಂಸದೆ ರೇಖಾ ವರ್ಮಾ, ಉತ್ತರ ಪ್ರದೇಶದ ಸಚಿವೆ ಬೇಬಿ ರಾಣಿ ಮೌರ್ಯಾ, ತಮಿಳುನಾಡು ಶಾಸಕಿ ವನತಿ ಶ್ರೀನಿವಾಸನ್‌, ಪಶ್ಚಿಮ ಬಂಗಾಳದ ಶಾಸಕಿ ಶ್ರೀರೂಪಾ ಮಿತ್ರ ಚೌಧರಿ ಮತ್ತು ಕುಶ್ಬು ಸುಂದರ್‌ ಸತ್ಯ ಶೋಧನಾ ಸಮಿತಿಯಲ್ಲಿದ್ದಾರೆ.

ಏಪ್ರಿಲ್‌ 5ರಂದು, ಪ್ರಮುಖ ಆರೋಪಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲು 9ನೇ ತರಗತಿ ವಿದ್ಯಾರ್ಥಿನಿಯು ಆತನ ಮನೆಗೆ ಭೇಟಿ ನೀಡಿದ್ದಾಗ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಳಾಗಿ ಮನೆಗೆ ಮರಳಿದ ಬಳಿಕ ವಿದ್ಯಾರ್ಥಿನಿ ಮೃತಪಟ್ಟಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT