ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್ ಚಾಲೀಸಾ ವಿವಾದ| ತಲೋಜಾ ಜೈಲಿನಲ್ಲಿ ರವಿ ರಾಣಾ, ಬೈಕುಲ್ಲಾ ಜೈಲಲ್ಲಿ ಪತ್ನಿ

Last Updated 25 ಏಪ್ರಿಲ್ 2022, 4:37 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ವಿರುದ್ಧ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಮತ್ತು ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಂಸದೆ ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು, ಅವರ ಪತಿ, ಶಾಸಕ ರವಿ ರಾಣಾ ಅವರನ್ನು ಮುಂಬೈನ ತಲೋಜಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ರವಿ ರಾಣಾ ಅವರನ್ನು ಈ ಮೊದಲು ಅರ್ತರ್‌ ರೋಡ್‌ ಜೈಲ್‌ನಲ್ಲಿ ಇರಿಸಲು ತೀರ್ಮಾನಿಸಲಾಗಿತ್ತು. ಆದರೆ, ಅಲ್ಲಿ ಭಾರಿ ಜನಸ್ತೋಮ ನೆರೆದಿದ್ದ ಕಾರಣ, ತಲೋಜಾ ಜೈಲಿಗೆ ಸ್ಥಳಾಂತರ ಮಾಡಲಾಯಿತು. ಈ ಬಗ್ಗೆ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಶನಿವಾರ ಬೆಳಗ್ಗೆ 9ಕ್ಕೆ ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಶುಕ್ರವಾರ ಹೇಳಿದ್ದರು. ರಾಣಾ ದಂಪತಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಬೆಳಗ್ಗೆಯಿಂದಲೇ ‘ಮಾತೋಶ್ರೀ’ ಬಳಿ ಜಮಾಯಿಸಿದ್ದರು. ಮತ್ತೊಂದು ಗುಂಪು ರಾಣಾ ದಂಪತಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿತ್ತು.

ಹನುಮಾನ್ ಚಾಲೀಸಾವನ್ನು ಪಠಿಸುವ ನಿರ್ಧಾರವನ್ನು ರಾಣಾ ದಂಪತಿ ಕೈಬಿಟ್ಟ ನಂತರ ವಿವಿಧ ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಣಾ ದಂಪತಿಯನ್ನು ಖಾರ್‌ ಉಪನಗರದಲ್ಲಿರುವ ಅವರ ನಿವಾಸದಿಂದ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದ ಪೊಲೀಸರು, ಸಂಜೆ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT