ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್ ಚಾಲೀಸಾ ವಿವಾದ| ಬಿಜೆಪಿ ನಾಯಕ ಕಿರೀಟ್‌ ಮೇಲೆ ಶಿವಸೇನಾ ದಾಳಿ: ಆಕ್ರೋಶ

Last Updated 24 ಏಪ್ರಿಲ್ 2022, 3:11 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿ ಮಾಜಿ ಸಂಸದ ಕಿರೀಟ್‌ಸೋಮೈಯ ಅವರ ಎಸ್‌ಯುವಿ ಕಾರಿನ ಮೇಲೆ ಶಿವಸೇನೆ ಕಾರ್ಯಕರ್ತರು ಶನಿವಾರ ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ತೂರಿದ್ದಾರೆ.

ಬಾಂದ್ರಾದಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಮಹಾರಾಷ್ಟ್ರದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಪತ್ನಿ, ಸಂಸದೆ ನವನೀತ್ ರಾಣಾ ಅವರನ್ನು ಖಾರ್‌ ಉಪನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದರು. ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷ ಸೃಷ್ಟಿಸಿದ ಆರೋಪ ಅವರ ಮೇಲೆ ಹೊರಿಸಲಾಗಿದೆ. ಶನಿವಾರ ರಾತ್ರಿ ದಂಪತಿಯನ್ನು ಠಾಣೆಯಲ್ಲಿ ಭೇಟಿಯಾಗಿ ಹೊರ ಬರುವಾಗ ಪ್ರತಿಭಟನಾ ನಿರತ ಶಿವಸೇನಾ ಕಾರ್ಯಕರ್ತರು ಕಿರೀಟ್‌ ಸೋಮೈಯ ಅವರ ಮೇಲೆ ದಾಳಿ ನಡೆಸಿದ್ದಾರೆ.

ತಮ್ಮ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಕಿರೀಟ್‌ ಸೋಮೈಯ ಬಾಂದ್ರಾ ಪೊಲೀಸ್‌ ಠಾಣೆಗೆ ತೆರಳಿದ್ದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಿರೀಟ್‌ ಸೋಮೈಯ, ’ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಶಿವಸೇನೆ ಬೆಂಬಲಿಗರ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ನಂತರ ಟ್ವೀಟ್‌ ಮಾಡಿರುವ ಕಿರೀಟ್‌ ಸೋಮೈಯ, ‘ಮುಂಬೈ ಪೊಲೀಸರು ನನ್ನ ದೂರಿಗೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ.ಶಿವಸೇನಾದ 70ರಿಂದ 80 ಗೂಂಡಾಗಳು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಈ ಬಗ್ಗೆ ಠಾಕ್ರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲು ಅಥವಾ ನನ್ನ ಎಫ್‌ಐಆರ್ ದಾಖಲಿಸಲು ನಿರಾಕರಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಮಂಜುನಾತ್‌ ಶಿಂಗೆ, ಕಿರೀಟ್‌ ಸೋಮೈಯ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು, ಕಿರೀಟ್‌ ಸೋಮೈಯ ಅವರ ಮೇಲಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೆಂದ್ರ ಫಡಣವೀಸ್‌, ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಾಳಿ ಒಪ್ಪತಕ್ಕದ್ದಲ್ಲ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕ ಸೋಮೈಯ ಅವರು ಕೇಂದ್ರ ಸರ್ಕಾರದ ವರ್ಗೀಕೃತ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದಾರೆ.

ಸೋಮೈಯ ಅವರ ಭೇಟಿಯು ರಾಣಾ ದಂಪತಿಗೆ ಬಿಜೆಪಿಯ ಬೆಂಬಲ ಇರುವುದನ್ನು ಸಾಬೀತುಪಡಿಸಿದೆ ಎಂದು ಶಿವಸೇನಾ ನಾಯಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT