ಮುಂಬೈ: ಬಾಂಬ್ ಬಗ್ಗೆ ಸುಳ್ಳು ಟ್ವೀಟ್; ಯುವಕನ ಬಂಧನ

ಮುಂಬೈ: ಇಲ್ಲಿನ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹುಸಿ ಟ್ವೀಟ್ ಮಾಡಿದ್ದ 19 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಜನವರಿ 22 ರಂದು 'ಕಮಾಂಡೊ ಸಿಂಗ್' ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಬನ್ವಾರಿ ಸಿಂಗ್ ಎಂಬಾತ ಈ ಬಗ್ಗೆ ಟ್ವೀಟ್ ಮಾಡಿದ್ದ.
ಈ ಟ್ವೀಟ್‌ನಲ್ಲಿ ಹಿಂದಿ ಭಾಷೆಯ ‘ಮೇಡಂ ಚೀಫ್ ಮಿನಿಸ್ಟರ್’ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಉಪನಗರ ಪ್ರದೇಶಗಳಾದ ಮಲಾಡ್, ಅಂಧೇರಿ ಮತ್ತು ವಾಸೈ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ತಿಳಿಸಿದ್ದ. ಅಲ್ಲದೆ ಈ ಟ್ವೀಟ್ ಅನ್ನು ಮುಂಬೈ ಪೊಲೀಸ್ ಮತ್ತು ಅಲ್ಲಿನ ಕಮಿಷನರ್‌ಗೆ ಟ್ಯಾಗ್ ಕೂಡ ಮಾಡಿದ್ದ.
‘ಶೋಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಯಾವುದೇ ಬಾಂಬ್ ಸಿಕ್ಕಿಲ್ಲ. ಇದೊಂದು ಹುಸಿ ಟ್ವೀಟ್ ಆಗಿತ್ತು. ಈ ನಡುವೆ ಆರೋಪಿಯು ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಈ ಸಂಬಂಧ ಸೈಬರ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು, ಅವನಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು. ಕಳೆದ ವಾರ ಈತನನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ಈತ ಟ್ವೀಟ್ ಮಾಡಲು ಉಪಯೋಗಿಸಿದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸೈಬರ್ ಇಲಾಖೆಯ ಪೊಲೀಸ್ ಉಪ ಆಯುಕ್ತೆ ರಶ್ಮಿ ಕರಂದಿಕರ್ ಅವರು ಮಾಹಿತಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.