ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ಕ್ರೀಡಾ ಸಚಿವ ಸ್ಥಾನ ತೊರೆದ ಸಂದೀಪ್‌ ಸಿಂಗ್‌

ಹರಿಯಾಣ: ಜೂನಿಯರ್‌ ಮಹಿಳಾ ಅಥ್ಲೆಟಿಕ್ಸ್‌ ತಂಡದ ಕೋಚ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ
Last Updated 1 ಜನವರಿ 2023, 16:14 IST
ಅಕ್ಷರ ಗಾತ್ರ

ಚಂಡೀಗಢ (ಪಿಟಿಐ): ಜೂನಿಯರ್‌ ಮಹಿಳಾ ಅಥ್ಲೆಟಿಕ್ಸ್‌ ತಂಡದ ಕೋಚ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹರಿಯಾಣದ ಕ್ರೀಡಾ ಸಚಿವ ಸಂದೀಪ್‌ ಸಿಂಗ್‌ ಅವರು ನೈತಿಕ ಹೊಣೆ ಹೊತ್ತು ಭಾನುವಾರ ತಮ್ಮ ಖಾತೆ ತೊರೆದಿದ್ದಾರೆ. ಆದರೆ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿಲ್ಲ. ಮುದ್ರಣ ಮತ್ತು ಲೇಖನ ಸಾಮಾಗ್ರಿ ಸಚಿವರಾಗಿ ಅವರು ಮುಂದುವರಿದಿದ್ದಾರೆ.

ಸಂದೀಪ್‌ ಅವರು ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಕೋಚ್‌ ದೂರು ನೀಡಿದ್ದರು. ಅದರ ಆಧಾರದಲ್ಲಿ ಚಂಡೀಗಢ ಪೊಲೀಸರು ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ದೂರಿನ ಹಿಂದೆ ತಮ್ಮ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ಸಂದೀಪ್‌ ಅವರು ಕೋಚ್‌ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ಹೀಗಾಗಿ ಹರಿಯಾಣದ ಪೊಲೀಸ್‌ ಮಹಾನಿರ್ದೇಶಕರು ಪ್ರಕರಣದ ತನಿಖೆಗಾಗಿ ಶನಿವಾರ ಸಮಿತಿಯೊಂದನ್ನು ರಚಿಸಿದ್ದರು.

‘ತನಿಖಾ ಸಮಿತಿಯು ವರದಿ ಒಪ್ಪಿಸುವವರೆಗೂ ಕ್ರೀಡಾ ಸಚಿವನಾಗಿ ಮುಂದುವರಿಯುವುದಿಲ್ಲ. ಖಾತೆಯನ್ನು ಮುಖ್ಯಮಂತ್ರಿಯವರಿಗೆ ಹಿಂದಿರುಗಿಸಿದ್ದೇನೆ’ ಎಂದು ಸಂದೀಪ್‌ ಭಾನುವಾರ ಹೇಳಿದ್ದಾರೆ.

‘ಸಂದೀಪ್‌ ವಿರುದ್ಧ ಶುಕ್ರವಾರ ದೂರು ನೀಡಲಾಗಿದೆ. ಅದರ ಆಧಾರದಲ್ಲಿ ಪೊಲೀಸ್‌ ಠಾಣೆ ಸೆಕ್ಟರ್‌ 26ರಲ್ಲಿ ಐಪಿಸಿ ಸೆಕ್ಷನ್‌ 354, 354ಎ, 354ಬಿ, 342 ಮತ್ತು 506ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಚಂಡೀಗಢ ಪೊಲೀಸ್‌ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

‘ಸಂದೀಪ್‌ ಅವರನ್ನು ಸಂಪುಟದಿಂದ ತಕ್ಷಣವೇ ಕೈಬಿಡಬೇಕು. ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಅವರು ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಬೇಕು’ ಎಂದು ಭಾರತೀಯ ರಾಷ್ಟ್ರೀಯ ಲೋಕದಳ ಒತ್ತಾಯಿಸಿದೆ.

‘ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು’ ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಆಗ್ರಹಿಸಿದ್ದಾರೆ.

ಒಲಿಂಪಿಯನ್‌ ಹಾಕಿಪಟುವಾಗಿರುವ ಸಂದೀಪ್‌ ಅವರು ಇದೇ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು.

ಬಾಕ್ಸ್‌

‘ನನ್ನನ್ನು ಖುಷಿಪಡಿಸಿದರೆ ನಿನ್ನನ್ನು ಸಂತೋಷವಾಗಿಡುವೆ’

‘ಜಿಮ್‌ನಲ್ಲಿ ನನ್ನನ್ನು ನೋಡಿದ್ದ ಸಂದೀಪ್‌ ಅವರು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ್ದರು. ಭೇಟಿಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಒಮ್ಮೆ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದ್ದ ಅವರು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಂಬಂಧಿಸಿದ ನನ್ನ ಪ್ರಮಾಣ ಪತ್ರ ಬಾಕಿ ಇರುವುದಾಗಿ ಹೇಳಿದ್ದರು. ಈ ವಿಚಾರವಾಗಿ ಮಾತನಾಡಬೇಕಿರುವುದರಿಂದ ತನ್ನನ್ನು ಭೇಟಿಯಾಗುವಂತೆ ಸೂಚಿಸಿದ್ದರು. ಹೀಗಾಗಿ ಅವರ ಭೇಟಿಗೆ ಒಪ್ಪಿದ್ದೆ’ ಎಂದು ಕೋಚ್‌, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಕೆಲ ದಾಖಲೆಗಳೊಂದಿಗೆ ಸಂದೀಪ್‌ ಅವರ ನಿವಾಸಕ್ಕೆ ತೆರಳಿದ್ದೆ. ನನ್ನನ್ನು ಕಂಡೊಡನೆ ಕ್ಯಾಬಿನ್‌ಗೆ ಕರೆದೊಯ್ದಿದ್ದ ಅವರು ನನ್ನ ಕೈಯಲ್ಲಿದ್ದ ದಾಖಲೆಗಳನ್ನು ಪಡೆದು ಟೇಬಲ್‌ವೊಂದರ ಮೇಲೆ ಇಟ್ಟಿದ್ದರು. ಬಳಿಕ ಕೈಯಿಂದ ಪಾದ ಮುಟ್ಟಿದ್ದರು. ಮೊದಲ ನೋಟದಲ್ಲೇ ನೀನು ಇಷ್ಟವಾಗಿಬಿಟ್ಟೆ. ನನ್ನನ್ನು ಖುಷಿಪಡಿಸಿದರೆ ನಿನ್ನನ್ನು ಸಂತೋಷವಾಗಿಡುತ್ತೇನೆ ಎಂದು ಹೇಳಿದ್ದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಪಾದದ ಮೇಲಿಟ್ಟಿದ್ದ ಕೈ ಸರಿಸಿ ಹೊರಹೋಗಲು ಯತ್ನಿಸಿದಾಗ ನನ್ನ ಟೀ–ಶರ್ಟ್‌ ಎಳೆದು ಹರಿದರು. ನಾನು ಅಳಲಾರಂಭಿಸಿದೆ. ನನ್ನ ಆಕ್ರಂದನ ಕೇಳಿ ಮನೆಯಲ್ಲಿದ್ದ ಸಿಬ್ಬಂದಿಯೆಲ್ಲಾ ಸ್ಥಳಕ್ಕೆ ಧಾವಿಸಿ ಬಂದರು. ಆದರೆ ಯಾರೊಬ್ಬರೂ ಸಹಾಯ ಮಾಡಲಿಲ್ಲ’ ಎಂದೂ ತಿಳಿಸಿದ್ದಾರೆ.

**

ಸಂತ್ರಸ್ತೆಯಿಂದ ಗೃಹ ಸಚಿವರ ಭೇಟಿ

ಸಂತ್ರಸ್ತ ಮಹಿಳಾ ಕೋಚ್‌ ಭಾನುವಾರ ಹರಿಯಾಣದ ಗೃಹ ಸಚಿವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

‘ಎಲ್ಲದಕ್ಕೂ ಒಂದು ಮಿತಿ ಇದೆ. ಕ್ರೀಡಾ ಇಲಾಖೆಯ ಉದ್ಯೋಗಿಯಾಗಿರುವ ತಾನು ಅವರ ಬಳಿ ಹೋಗಲೇಬೇಕಿತ್ತು. ಅಂತಹ ಪರಿಸ್ಥಿತಿಯನ್ನು ಸಚಿವರು ಸೃಷ್ಟಿಸಿದ್ದರು. ನನ್ನ ಹಾಗೆ ಹಲವರು ಈ ಬಗೆಯ ಹಿಂಸೆ ಅನುಭವಿಸಿದ್ದಾರೆ. ಅದನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸಂದೀಪ್‌ ಅವರನ್ನು ಜೈಲಿಗಟ್ಟಿದರೆ ಇನ್ನಷ್ಟು ಮಂದಿ ದೂರು ನೀಡಲು ಮುಂದೆ ಬರಲಿದ್ದಾರೆ’ ಎಂದು ಸಂತ್ರಸ್ತ ಕೋಚ್‌ ಹೇಳಿದ್ದಾರೆ.

ಕೋಟ್ಸ್‌

ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದೇನೆ. ಚಂಡೀಗಢ ಪೊಲೀಸರು ಈ ಕುರಿತು ತನಿಖೆ ಕೈಗೊಂಡು ನ್ಯಾಯ ಒದಗಿಸುವ ವಿಶ್ವಾಸವಿದೆ– ಮಹಿಳಾ ಕೋಚ್‌

ತಮ್ಮ ವಿರುದ್ಧ ಮಹಿಳಾ ಕೋಚ್ ಮಾಡಿರುವ ಆರೋಪ ಆಧಾರ ರಹಿತವಾದುದು. ಈ ಕುರಿತು ಸ್ವತಂತ್ರ ತನಿಖೆ ನಡೆಯಲಿ–ಸಂದೀಪ್‌ ಸಿಂಗ್‌, ಸಚಿವ

ಮಹಿಳೆಯ ದೂರು ಆಲಿಸಿದ್ದೇನೆ. ಈ ಕುರಿತು ಸಂದೀಪ್‌ ಸಿಂಗ್‌ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ. ಈ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗುವುದು–ಅನಿಲ್‌ ವಿಜ್‌, ಹರಿಯಾಣ ಗೃಹ ಸಚಿವ

ಮುಖ್ಯಾಂಶಗಳು

*ಕುರುಕ್ಷೇತ್ರದ ಪೆಹವಾ ಕ್ಷೇತ್ರದ ಶಾಸಕರಾಗಿರುವ ಸಂದೀಪ್‌

*ಸಂಪುಟದಿಂದ ಕೈಬಿಡುವಂತೆ ವಿರೋಧ ಪಕ್ಷಗಳ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT