ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣವು ವಿಷ ವರ್ತುಲ ಇದ್ದ ಹಾಗೆ- ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠದ ಅಭಿಪ್ರಾಯ
Last Updated 29 ಮಾರ್ಚ್ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ‘ದ್ವೇಷ ಭಾಷಣವು ವಿಷ ವರ್ತುಲವಿದ್ದಂತೆ. ರಾಜ್ಯ ಸರ್ಕಾರಗಳು ದುರ್ಬಲಗೊಂಡಿರುವುದರಿಂದ ಹಾಗೂ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದಾಗಿ ಇದು ಮುಂದುವರಿಯುತ್ತಲೇ ಇದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಕೇರಳ ಮೂಲದ ಶಾಹೀನ್‌ ಅಬ್ದುಲ್ಲಾ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತು.

‘ಸಮಾಜಕ್ಕೆ ಮಾರಕವಾಗಿರುವ ಈ ಅಪರಾಧವನ್ನು ತೊಡೆದುಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಏಕೆ ಸೂಕ್ತ ಕಾರ್ಯವಿಧಾನ ರೂಪಿಸುತ್ತಿಲ್ಲ’ ಎಂದು ಪ್ರಶ್ನಿಸಿರುವ ನ್ಯಾಯಪೀಠ, ‘ದೇಶದಲ್ಲಿನ ಭ್ರಾತೃತ್ವದ ಕಲ್ಪನೆಯಲ್ಲಿ ಈಗ ಬಿರುಕುಗಳು ಮೂಡುತ್ತಿವೆ. ಇದು ವಿಷಾದನೀಯ’ ಎಂದು ತಿಳಿಸಿದೆ.

‘ರಾಜಕಾರಣ ಮತ್ತು ಧರ್ಮ ಪ್ರತ್ಯೇಕಗೊಂಡಾಗ ಹಾಗೂ ಜನಪ್ರತಿನಿಧಿಗಳು ರಾಜಕಾರಣದಲ್ಲಿ ಧರ್ವ ಬೆರೆಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣದ ಸಮಸ್ಯೆ ಕೊನೆಗೊಳ್ಳಲಿದೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇರಳದಲ್ಲಿ ನಡೆದಿರುವ ಘಟನೆಯೊಂದಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನು ಪ್ರದರ್ಶಿಸುವಂತೆ ಮನವಿ ಮಾಡಿದರು. ಆಗ ನ್ಯಾಯಪೀಠವು, ‘ರಾಜ್ಯ ಸರ್ಕಾರಗಳು ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡದಿರುವುದರಿಂದಾಗಿ ಇದು ಮುಂದುವರಿಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಮೌನಕ್ಕೆ ಜಾರಿದ್ದು, ಇಂತಹ ಸರ್ಕಾರಗಳು ನಮಗೆ ಬೇಕೆ’ ಎಂದು ಮೆಹ್ತಾ ಅವರನ್ನು ಪ್ರಶ್ನಿಸಿತು.

‘ಕೇರಳ ಹಾಗೂ ತಮಿಳುನಾಡಿನಲ್ಲಿ ವರದಿಯಾಗಿರುವ ದ್ವೇಷ ಭಾಷಣದ ಕುರಿತು ಪರಿಶೀಲನೆ ನಡೆಸಲು ನಾವೇಕೆ ಹಿಂಜರಿಯುತ್ತಿದ್ದೇವೆ. ಹಿಂದೂಗಳು ಹಾಗೂ ಕ್ರೈಸ್ತರು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇರಳದಲ್ಲಿ ಹೇಳಲಾಗಿದೆ. ಇದು ಇತರ ಧರ್ಮಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆ ಎಂಬುದು ಸ್ಪಷ್ಟ. ಇದಕ್ಕೂ ರಾಜಕಾರಣಕ್ಕೂ ಯಾವ ಸಂಬಂಧವೂ ಇಲ್ಲ. ಇದು ಆಘಾತಕಾರಿಯಾದುದು. ಈ ನ್ಯಾಯಾಲಯದ ಆತ್ಮಸಾಕ್ಷಿಗೆ ಪೆಟ್ಟು ನೀಡುವಂತಹದ್ದು’ ಎಂದು ಮೆಹ್ತಾ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಇದರ ಬಗ್ಗೆ ನಮಗೆ ಗೊತ್ತಿದೆ’ ಎಂದು ತಿಳಿಸಿತು. ಆಗ ಮೆಹ್ತಾ, ‘ಹಾಗಿದ್ದ ಮೇಲೆ ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು.

‘ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರೊಬ್ಬರು ‘ಸಮಾನತೆ ಬೇಕಿದ್ದರೆ ಎಲ್ಲಾ ಬ್ರಾಹ್ಮಣರನ್ನೂ ಕೊಂದು ಹಾಕಿ’ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲಾ ಬಿಟ್ಟು ಅರ್ಜಿದಾರರು ಆಯ್ದ ಕೆಲವನ್ನಷ್ಟೇ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ವರದಿಯಾಗಿರುವ ಪ್ರಕರಣಗಳನ್ನೂ ಅರ್ಜಿಯಲ್ಲಿ ಸೇರ್ಪಡೆ ಮಾಡಲು ಅವರಿಗೆ ಹೇಳಿ’ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.

‘ರಾಜ್ಯ ಸರ್ಕಾರಗಳು ನಿಸ್ಸಹಾಯಕವಾಗಿರುವುದಿಂದ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ’ ಎಂದು ನ್ಯಾಯಮೂರ್ತಿ ಜೋಸೆಫ್‌ ಪ್ರತಿಕ್ರಿಯಿಸಿದರು. ಆಗ ಮೆಹ್ತಾ, ‘ಕೇಂದ್ರ ಸರ್ಕಾರ ಇದರಿಂದ ಹೊರತಾಗಿದೆ. ಕೇಂದ್ರವು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ’ ಎಂದರು.

‘ದ್ವೇಷ ಭಾಷಣ ನಿಯಂತ್ರಿಸುವ ದಿಸೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಕ್ರಮ ಕೈಗೊ‌ಳ್ಳಬಾರದು’ ಎಂದು ಮಹಾರಾಷ್ಟ್ರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಕೋರಿದರು. ಅವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು.

ನ್ಯಾಯಾಲಯದ ಆದೇಶದ ಹೊರತಾಗಿಯೂ ಹಿಂದೂ ಸಂಘಟನೆಗಳ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಏಪ್ರಿಲ್‌ 28ಕ್ಕೆ ಮುಂದೂಡಿತು.

ಮುಖ್ಯಾಂಶಗಳು

ಏಪ್ರಿಲ್‌ 28ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಪೀಠ

ಪ್ರತಿಕ್ರಿಯೆ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ

**

ನೆಹರೂ, ವಾಜಪೇಯಿ ಹೆಸರು ಉಲ್ಲೇಖ

‘ನಮ್ಮಲ್ಲಿ ಪಂಡಿತ್‌ ಜವಾಹರಲಾಲ್‌ ನೆಹರೂ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವರಂತಹ ವಾಗ್ಮಿಗಳು ಇದ್ದರು. ಇವರ ಭಾಷಣಗಳನ್ನು ಆಲಿಸಲು ದೂರದ ಊರುಗಳಿಂದಲೂ ಜನ ಬರುತ್ತಿದ್ದರು. ಆದರೆ ಈಗ ಕೆಲಸಕ್ಕೆ ಬಾರದವರೆಲ್ಲಾ ದ್ವೇಷ ಭಾಷಣದಲ್ಲಿ ತೊಡಗಿದ್ದಾರೆ. ದೇಶ ಎತ್ತ ಸಾಗುತ್ತಿದೆ’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ದೇಶವು ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬೇಕಾದರೆ ನಾವು ಈ ನೆಲದ ಕಾನೂನನ್ನು ಗೌರವಿಸಬೇಕು. ಪ್ರತಿಯೊಬ್ಬ ನಾಗರಿಕನನ್ನೂ ಘನತೆಯಿಂದ ಕಾಣಬೇಕು’ ಎಂದು ಹೇಳಿತು.

‘ಶಿಕ್ಷಣ ಹಾಗೂ ತಿಳಿವಳಿಕೆಯ ಕೊರತೆಯಿಂದಾಗಿ ಅಸಹಿಷ್ಣುತೆ ಮನೆಮಾಡುತ್ತದೆ. ನ್ಯಾಯಾಂಗ ನಿಂದನೆ ಪ್ರಕರಣಗಳು ನಿರಂತರವಾಗಿ ದಾಖಲಾಗುತ್ತಿವೆ. ಇದನ್ನೆಲ್ಲಾ ನ್ಯಾಯಾಲಯ ಹೇಗೆ ನಿಭಾಯಿಸಬೇಕು. ಇತರ ಸಮುದಾಯಗಳು ಹಾಗೂ ಆ ಸಮುದಾಯಗಳ ಜನರನ್ನು ಹೀಯಾಳಿಸುವುದಿಲ್ಲ ಎಂದು ಈ ದೇಶದ ನಾಗರಿಕರೇಕೆ ಪ್ರತಿಜ್ಞೆ ಮಾಡುವುದಿಲ್ಲ’ ಎಂದೂ ನ್ಯಾಯಪೀಠ ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT