ಶುಕ್ರವಾರ, ಅಕ್ಟೋಬರ್ 23, 2020
21 °C
ಸುಪ್ರೀಂ ಕೋರ್ಟ್‌ಗೆ ಅಫಿಡಾವಿಟ್‌ ಸಲ್ಲಿಸಿದ ಉತ್ತರ ಪ್ರದೇಶ ಸರ್ಕಾರ

ಅತ್ಯಾಚಾರ ಸಂತ್ರಸ್ತೆಯ ಕುಟುಂಬ,ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ: ಉ.ಪ್ರದೇಶ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಥರಸ್‌ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರು ಹಾಗೂ ಸಾಕ್ಷಿದಾರರ ರಕ್ಷಣೆಗೆ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಸೆ.14ರಂದು 19 ವರ್ಷದ ದಲಿತ ಯುವತಿ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ‘ಪ್ರಕರಣದ ತನಿಖೆಯ ಕುರಿತು 15 ದಿನಗಳಿಗೊಮ್ಮೆ ಸರ್ಕಾರಕ್ಕೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಸಿಬಿಐಗೆ ನಿರ್ದೇಶಿಸಬಹುದು. ಈ ವರದಿಯನ್ನು ಉತ್ತರ ಪ್ರದೇಶ ಡಿಜಿಪಿ ಅವರು ಸುಪ್ರೀಂ ಕೋರ್ಟ್‌ ಮುಂದಿಡಲಿದ್ದಾರೆ’ ಎಂದು ಉತ್ತರ ಪ್ರದೇಶ ಸರ್ಕಾರವು ತಿಳಿಸಿದೆ.

‘ನ್ಯಾಯಯುತವಾದ ತನಿಖೆಗಾಗಿ ಸಂತ್ರಸ್ತೆಯ ಕುಟುಂಬಕ್ಕೆ ಹಾಗೂ ಸಾಕ್ಷಿದಾರರಿಗೆ ಸಂಪೂರ್ಣವಾದ ಭದ್ರತೆ ನೀಡಲು ಸರ್ಕಾರ ಬದ್ಧವಾಗಿದೆ. ಅವರ ರಕ್ಷಣೆಗೆ 15 ಸಶಸ್ತ್ರ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.ಸಂತ್ರಸ್ತೆಯ ಹಳ್ಳಿಯ ಪ್ರವೇಶದಲ್ಲಿ ಹಾಗೂ ಮನೆಯ ಸಮೀಪ ಇಬ್ಬರು ಇನ್‌ಸ್ಪೆಕ್ಟರ್‌ಗಳು, ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ 16 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಇವರೆಲ್ಲರೂ ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.  ಹಾಥರಸ್‌ ಜಿಲ್ಲೆಯ ಚಾಂದ್‌ಪಾದಲ್ಲಿರುವ ಸಂತ್ರಸ್ತೆಯ ಮನೆಯ ಹೊರಗೆ ಎಂಟು ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ವಿಶೇಷ ತಂಡವನ್ನೂ ನಿಯೋಜಿಸಲಾಗಿದೆ’ ಎಂದು ಅಫಿಡಾವಿಟ್‌ನಲ್ಲಿ ಸರ್ಕಾರ ತಿಳಿಸಿದೆ.

‘ಸಂತ್ರಸ್ತೆಯ ಕುಟುಂಬದ ಸದಸ್ಯರು ಹಾಗೂ ಸಾಕ್ಷಿದಾರರ ಖಾಸಗಿತನಕ್ಕೆ ಧಕ್ಕೆಯಾಗಬಾರದು ಹಾಗೂ ಅವರ ಚಲನವಲನಕ್ಕೆ ಯಾವುದೇ ನಿರ್ಬಂಧಗಳನ್ನು ಹಾಕಬಾರದು ಎಂದು ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರಕರಣದ ವಿಚಾರಣೆಗಾಗಿ ಕುಟುಂಬವು ವಕೀಲರನ್ನು ಸಂಪರ್ಕಿಸಿದೆ, ಹೀಗಿದ್ದರೂ, ಸರ್ಕಾರಿ ವಕೀಲರೂ ಕುಟುಂಬದ ಪರವಾಗಿ ಈ ಪ್ರಕರಣವನ್ನು ಕೈಗೆತ್ತಕೊಳ್ಳಬೇಕು ಎಂದು ಸಂತ್ರಸ್ತೆಯ ಸಹೋದರ ಮನವಿ ಮಾಡಿದ್ದಾರೆ’ ಎಂದು ಅಫಿಡಾವಿಟ್‌ನಲ್ಲಿ ಸರ್ಕಾರ ಉಲ್ಲೇಖಿಸಿದೆ. 

‘ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಮುಂದುವರಿಸಲು ಈ ಅರ್ಜಿಯನ್ನು ಕಾಯ್ದಿರಿಸಬೇಕು ಹಾಗೂ ನಿಗದಿಯ ಅವಧಿಯೊಳಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲೇ ಈ ತನಿಖೆ ನಡೆಯಬೇಕು’ ಎಂದು ಸರ್ಕಾರ ಉಲ್ಲೇಖಿಸಿದೆ.

ಅ.6ರಂದು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ, ಸಾಕ್ಷಿದಾರರ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಲು ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.    

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು