ಬುಧವಾರ, ಅಕ್ಟೋಬರ್ 21, 2020
23 °C
ಹಾಥರಸ್ ಅತ್ಯಾಚಾರ ಸಂತ್ರಸ್ತೆ ಪರವಾಗಿ ವಿವಿಧೆಡೆ ಪ್ರತಿಭಟನೆ

ಹಾಥರಸ್ ಅತ್ಯಾಚಾರ: ನ್ಯಾಯಕ್ಕಾಗಿ ಭಾರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಥರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿ ಇಲ್ಲಿನ ಜಂತರ್‌ಮಂತರ್‌ನಲ್ಲಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಸದಸ್ಯರು ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎಡಪಕ್ಷಗಳ ಮುಖಂಡರಾದ ಬೃಂದಾ ಕಾರಟ್, ಸೀತಾರಾಂ ಯೆಚೂರಿ, ಡಿ. ರಾಜಾ, ಜಿಗ್ನೇಶ್ ಮೆವಾನಿ, ಭೀಮ್ ಆರ್ಮಿ ನಾಯಕ ಚಂದ್ರಶೇಖರ ಆಜಾದ್, ಎಎಪಿ ಮುಖಂಡ ಸೌರಭ್ ಭಾರದ್ವಾಜ್, ನಟಿ–ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಇದ್ದರು. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗೋವಾದಲ್ಲೂ ಪ್ರತಿಭಟನೆಗಳು ನಡೆದಿವೆ.

ನ್ಯಾಯದ ಭರವಸೆ: ಸಂತ್ರಸ್ತೆಯ ಸ್ಮರಣಾರ್ಥ ವಾಲ್ಮೀಕಿ ಸಮುದಾಯದವರು ಆಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಹಾಜರಿದ್ದು, ‘ಸಂತ್ರಸ್ತೆಯ ಕುಟುಂಬ ಒಂಟಿಯಲ್ಲ. ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ’ ಎಂದರು. 

ಒಬ್ರಯಾನ್ ಮೇಲೆ ಹಲ್ಲೆ: ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಭೇಟಿಗೆ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಿಯೋಗದ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ಉತ್ತರ ಪ್ರದೇಶ ಪೊಲೀಸರು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಅವರನ್ನು ತಳ್ಳಾಡಿದ್ದಾರೆ. 

ಒಬ್ರಯಾನ್ ಜತೆ ಸಂಸದರಾದ ಕಾಕೊಲಿ ಘೋಷ್ ದಸ್ತಿದಾರ್ ಮತ್ತು ಪ್ರತಿಮಾ ಮಂಡಲ್, ಮಾಜಿ ಸಂಸದೆ ಮಮತಾ ಠಾಕೂರ್ ಇದ್ದರು. ಸಂತ್ರಸ್ತೆಯ ಮನೆಗೆ ತೆರಳುವ ಮಾರ್ಗಮಧ್ಯೆ ಇವರನ್ನು ಪೊಲೀಸರು ತಡೆದರು.

‘ಕಷ್ಟದಲ್ಲಿರುವ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಒಬ್ಬ ಚುನಾಯಿತ ಪ್ರತಿನಿಧಿಗೆ ಸಾಧ್ಯವಿಲ್ಲ ಎಂದರೆ ಇದು ‘ಜಂಗಲ್‌ರಾಜ್’ ಅಲ್ಲವೇ? ನಾವೇನೂ ಶಸ್ತ್ರಾಸ್ತ್ರ ಹಿಡಿದು ಬಂದಿದ್ದೇವೆಯೇ? ಎಂದು ಒಬ್ರಯಾನ್ ಪ್ರಶ್ನಿಸಿದರು.

ಮಹಿಳಾ ಪ್ರತಿನಿಧಿಗಳಿಗಾದರೂ ಅವಕಾಶ ನೀಡುವಂತೆ ಅವರು ಮನವಿ ಮಾಡಿದರು.  ಈ ಸಂದರ್ಭದಲ್ಲಿ ಪೊಲೀಸರು ಮತ್ತು ನಿಯೋಗದ ಮಧ್ಯೆ ಘರ್ಷಣೆ ನಡೆದಿದೆ. ತಳ್ಳಾಟದಲ್ಲಿ ಒಬ್ರಯಾನ್‌ ಅವರು ನೆಲಕ್ಕೆ ಬಿದ್ದಿರುವ ವಿಡಿಯೊ ವೈರಲ್‌ ಆಗಿದೆ. 

200 ಜನರ ಮೇಲೆ ಎಫ್‌ಐಆರ್:  ಗುರುವಾರ ಹಾಥರಸ್ ಸಂತ್ರಸ್ತೆಯ ಕುಟುಂಬದ ಭೇಟಿಗೆ ತೆರಳುತ್ತಿದ್ದ ವೇಳೆ ಅಂತರ ಕಾಯ್ದುಕೊಳ್ಳದ ಆರೋಪದಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 200ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವರ್ಚಸ್ಸಿಗೆ ಧಕ್ಕೆ

ಆತುರಾತುರವಾಗಿ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಬಿಜೆಪಿ ನಾಯಕಿ ಉಮಾ ಭಾರತಿ ಪ್ರಶ್ನಿಸಿದ್ದಾರೆ. ‘ಸಂತ್ರಸ್ತೆಯ ಭೇಟಿಗೆ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳಿಗೆ ಅವಕಾಶ ನೀಡದಿರುವುದು ಸರಿಯಲ್ಲ’ ಎಂದಿರುವ ಅವರು, ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದಿದ್ದಾರೆ.

ತಮಗೆ ಕೋವಿಡ್‌ ಸೋಂಕು ತಗುಲದೇ ಇದ್ದಿದ್ದರೆ, ಸಂತ್ರಸ್ತೆಯ ಕುಟುಂಬದ ಜೊತೆಗೆ ಕುಳಿತುಕೊಳ್ಳುತ್ತಿದ್ದೆ ಎಂದಿದ್ದಾರೆ. ‘ಅಯೋಧ್ಯೆಯಲ್ಲಿ ರಾಮಮಂದಿಕ್ಕೆ ಅಡಿಗಲ್ಲು ಹಾಕುವ ಮೂಲಕ ರಾಮರಾಜ್ಯದ ಭರವಸೆ ನೀಡಿದ್ದೇವೆ. ಆದರೆ ಪೊಲೀಸರ ವರ್ತನೆಯಿಂದ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಕುಂದುಂಟಾಗಿದೆ’ ಎಂದು ಅವರು ಹೇಳಿದ್ದಾರೆ.

ಎಸ್‌ಪಿ ಅಮಾನತು

ಘಟನೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಶುಕ್ರವಾರ ಪ್ರಾಥಮಿಕ ವರದಿ ನೀಡಿದ್ದು, ಇದರ ಆಧಾರದ ಮೇಲೆ ಹಾಥರಸ್ ಎಸ್‌ಪಿ ವಿಕ್ರಾಂತ್ ವೀರ್ ಹಾಗೂ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ವಿನೀತ್ ಜೈಸ್ವಾಲ್ ಅವರನ್ನು ಹಾಥರಸ್‌ ಎಸ್‌ಪಿ ಆಗಿ ನಿಯೋಜಿಸಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು