ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಿಂದ ಲೇಖನ ತೆಗೆಯಲು ಮನವಿ; ಕೇಂದ್ರ, ಗೂಗಲ್, ಟ್ವಿಟರ್‌ಗೆ ನೋಟಿಸ್

Last Updated 11 ನವೆಂಬರ್ 2021, 10:41 IST
ಅಕ್ಷರ ಗಾತ್ರ

ನವದೆಹಲಿ: ವ್ಯಕ್ತಿಯ ಖಾಸಗೀತನದ ಹಕ್ಕು ಉಲ್ಲೇಖಿಸಿ ವ್ಯಕ್ತಿಯೊಬ್ಬರು, ವಂಚನೆ ಮತ್ತು ಬೆದರಿಕೆ ಪ್ರಕರಣದಲ್ಲಿ ತಾನು ಶಿಕ್ಷೆಗೆ ಒಳಗಾಗಿರುವ ಸುದ್ದಿಯ ವರದಿಗಳನ್ನು ಅಂತರ್ಜಾಲದಿಂದ ತೆಗೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ದಾಖಲಿಸಬೇಕು ಎಂದು ಸೂಚಿಸಿ ನ್ಯಾಯಮೂರ್ತಿ ರೇಖಾ ಪಳ್ಳಿ ಅವರು ಕೇಂದ್ರ ಸರ್ಕಾರ, ಗೂಗಲ್‌, ಟ್ವಿಟರ್‌ ಹಾಗೂ ಎರಡು ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದರು. ಡಿಸೆಂಬರ್‌ 13ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

‘2015ರಲ್ಲಿ ವಿದೇಶದಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಲೀಸೆಸ್ಟರ್‌ ಕ್ರೌನ್‌ ಕೋರ್ಟ್‌ ಶಿಕ್ಷೆ ವಿಧಿಸಿದೆ. ಒಂಬತ್ತು ವರ್ಷ ಶಿಕ್ಷೆ ಅನುಭವಿಸಿದ್ದು, ಕಳೆದ ಜುಲೈನಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಶಿಕ್ಷೆ ಕುರಿತ ಲೇಖನಗಳು ಈಗಲೂ ಇಂಟರ್‌ನೆಟ್‌ನಲ್ಲಿ ಲಭ್ಯವಿವೆ. ಇವುಗಳಿಂದ ಮಕ್ಕಳ ಬದುಕಿನ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ನಿತ್ಯದ ಬದುಕಿನ ಮೇಲೆ ಈಗಲೂ ಪರಿಣಾಮವಾಗುತ್ತಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲರು, ‘ಉಲ್ಲೇಖಿಸಲಾದ ಲೇಖನಗಳನ್ನು ಜಾಲತಾಣದಿಂದ ತೆಗೆಯಲು ಸೂಚಿಸಬೇಕು ಎಂದು ಕೋರಿದರು. ಕೇಂದ್ರ ಸರ್ಕಾರವನ್ನು ವಕೀಲ ಮನೀಶ್‌ ಮೋಹನ್‌ ಪ್ರತಿನಿಧಿಸಿದ್ದರು.

ಗೂಗಲ್ ಜಾಲತಾಣವನ್ನು ಪ್ರತಿನಿಧಿಸಿದ್ದ ವಕೀಲ ಮಮತಾ ಝಾ, ಅರ್ಜಿದಾರರು ಉಲ್ಲೇಖಿಸಿರುವ ಲೇಖನಗಳು ಕೋರ್ಟ್‌ನ ಆದೇಶಗಳು. ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ ಲೇಖನಗಳನ್ನುಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ಅರ್ಜಿದಾರರು ಸಂವಿಧಾನದ ವಿಧಿ 20 ಅನ್ನೂ ಉಲ್ಲೇಖಿಸಿದ್ದಾರೆ. ಅದರ ಪ್ರಕಾರ, ನಿರ್ದಿಷ್ಟ ತಪ್ಪಿಗೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷಿಸುವುದರ ವಿರುದ್ಧ ಈ ವಿಧಿ ರಕ್ಷಣೆ ನೀಡಲಿದೆ. ಕಾನೂನು ಪ್ರಕಾರ ಒಮ್ಮೆ ಶಿಕ್ಷೆ ಅನುಭವಿಸಿರುವ ವ್ಯಕ್ತಿ ಅಥವಾ ಆತನ ಕುಟುಂಬ ಸದಸ್ಯರ ಸಾಮಾಜಿಕ ಜೀವನಕ್ಕೆ ಧಕ್ಕೆಯಾಗುವಂತೆ ಪ್ರಕರಣದ ವಿವರ ಬಹಿರಂಗಪಡಿಸುವುದು ಸಲ್ಲದು ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT