ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನೌದೀಪ್ ಕೌರ್‌ಗೆ ಜಾಮೀನು

ಪಂಜಾಬ್‌–ಹರಿಯಾಣ ಹೈಕೋರ್ಟ್‌ ಆದೇಶ
Last Updated 26 ಫೆಬ್ರುವರಿ 2021, 7:55 IST
ಅಕ್ಷರ ಗಾತ್ರ

ಚಂಡೀಗಢ: ವೇತನಕ್ಕಾಗಿ ಆಗ್ರಹಿಸಿ ಕಂಪನಿಯೊಂದರ ಎದುರು ಪ್ರತಿಭಟನೆ ನಡೆಸುವ ವೇಳೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಸುಮಾರು 2 ತಿಂಗಳಿನಿಂದ ಜೈಲಿನಲ್ಲಿದ್ದ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಪಂಜಾಬ್‌ನ ನೌದೀಪ್ ಕೌರ್ ಅವರಿಗೆ ಶುಕ್ರವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಜಾಮೀನು ನೀಡಿದೆ.

ನೌದೀಪ್ ಕೌರ್ ಅವರು ಹರಿಯಾಣದ ಸೋನಿಪತ್‌ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಜ.12ರಂದು ಕಂಪನಿಯೊಂದರ ಎದುರು ವೇತನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು. ಇವರ ವಿರುದ್ಧ ಕೊಲೆ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಆರೋಪಗಳನ್ನು ಹೊರಿಸಲಾಗಿತ್ತು.

‘ನೌದೀಪ್ ಕೌರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಹೈಕೋರ್ಟ್‌ ಅವರಿಗೆ ಜಾಮೀನು ನೀಡಿದೆ‘ ಎಂದು ನೌದೀಪ್ ಪರ ವಕೀಲರಾದ ಅರ್ಶದೀಪ್ ಸಿಂಗ್ ಚೀಮಾ ತಿಳಿಸಿದರು.

ನೌದೀಪ್ ಕೌರ್ ಅವರು, ಜಾಮೀನು ಅರ್ಜಿಯಲ್ಲಿ, ‘ನನ್ನನ್ನು ಬಂಧಿಸಿದ ಸೋನಿಪತ್ ಪೊಲೀಸರು ಠಾಣೆಯಲ್ಲಿ ತೀವ್ರವಾಗಿ ಥಳಿಸಿದರು. ನನ್ನ ವಿರುದ್ಧ ಐಪಿಸಿ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ಹಾಕಿ, ತಪ್ಪಾಗಿ ಬಂಧಿಸಲಾಗಿದೆ‘ ಎಂದು ಉಲ್ಲೇಖಿಸಿದ್ದರು.‌ ಆದರೆ, ಇದು ಆಧಾರ ರಹಿತ ಆರೋಪ ಎಂದು ಪೊಲೀಸರು ನಿರಾಕರಿಸಿದ್ದರು.

‘ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನಕ್ಕೆ ಭಾರಿ ಬೆಂಬಲ ನೀಡುವಲ್ಲಿ ಯಶಸ್ವಿಯಾಗಿದ್ದರಿಂದ ನನ್ನನ್ನು ಗುರಿಯಾಗಿಸಿ ಸುಳ್ಳು ಆರೋಪ ಮಾಡಲಾಗಿದೆ’ ಎಂದು ನೌದೀಪ್ ಕೌರ್‌ ಹೇಳಿದ್ದಾರೆ.

ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಮೂಲದ ನೌದೀಪ್ ಕೌರ್ ಅವರನ್ನು ಹರಿಯಾಣದ ಕರ್ನಾಲ್ ಜೈಲಿನಲ್ಲಿ ಇರಿಸಲಾಗಿತ್ತು. ಹೈಕೋರ್ಟ್ ಇವರ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 24 ರಂದು ಕೈಗೆತ್ತಿಕೊಂಡು ತೀರ್ಪನ್ನು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT