ಮಂಗಳವಾರ, ಮೇ 18, 2021
22 °C

ಕ್ರಿಮಿನಲ್‌ ಆರೋಪ ತನಿಖೆಗೆ ಹೈಕೋರ್ಟ್ ತಡೆ ನೀಡಬಾರದು: ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಮಿನಲ್‌ ಪ್ರಕರಣಗಳ ಆರೋಪಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ಗಳು ಮಾಮೂಲಿ ಎಂಬಂತೆ ಅಥವಾ ಯಾಂತ್ರಿಕವಾಗಿ ಮಧ್ಯಂತರ ತಡೆ ನೀಡಬಾರದು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಎಂ.ಆರ್.ಶಾ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.

‘ನ್ಯಾಯಾಂಗ ಮತ್ತು ಪೊಲೀಸ್‌ ಇಲಾಖೆಯ ಕಾರ್ಯ ಒಂದಕ್ಕೊಂದು ಪೂರಕವಾಗಿರಬೇಕೇ ಹೊರತು ಒಂದರ ಕಾರ್ಯ ವ್ಯಾಪ್ತಿಯನ್ನು ಮತ್ತೊಂದು ಅತಿಕ್ರಮಿಸಿದಂತಿರಬಾರದು’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಅಪರಾಧ ಕುರಿತು ತನಿಖೆ ನಡೆಯುತ್ತಿರುವ ಹಂತದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಬಾರದು. ಒಂದು ವೇಳೆ ಕೋರ್ಟ್‌ನ ಮಧ್ಯಪ್ರವೇಶ ಇಲ್ಲದಿದ್ದರೆ ಸಂತ್ರಸ್ತ ವ್ಯಕ್ತಿಗೆ ನ್ಯಾಯ ಸಿಗುವುದಿಲ್ಲ ಎಂಬಂಥ ಸನ್ನಿವೇಶ ಕಂಡುಬಂದಾಗ ನ್ಯಾಯಾಂಗದ ಮಧ್ಯಪ್ರವೇಶವನ್ನು ಒಪ್ಪಬಹುದು’ ಎಂದು ಹೇಳಿತು.

‘ಕೋರ್ಟ್‌ಗಳಿಗೆ ಅಸಾಧಾರಣ ಅಧಿಕಾರ ಇದ್ದಾಗ್ಯೂ, ಮನಸ್ಸಿಗೆ ಬಂದ ಹಾಗೆ ಕಾರ್ಯ ನಿರ್ವಹಿಸಬಾರದು’ ಎಂದು ನ್ಯಾಯಪೀಠ ಎಚ್ಚರಿಸಿತು.

ಸಿಆರ್‌ಪಿಸಿ ಸೆಕ್ಷನ್‌ 482ಅಡಿ ಸಲ್ಲಿಸಲಾಗುವ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್‌ಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಮೂರ್ತಿ ಎಂ.ಆರ್‌.ಶಾ ಅವರು ತೀರ್ಪಿನಲ್ಲಿ ಉಲ್ಲೇಖಿಸಿದರು.

ಮುಂಬೈ ಮೂಲದ ನಿಹಾರಿಕಾ ಇನ್‌ಫ್ರಾಸ್ಟ್ರಕ್ಚರ್ ಪ್ರೈ. ಲಿ. ಎಂಬ ಕಂಪನಿಯು  ಬೆಲೆ ಬಾಳುವ ಸ್ವತ್ತಿನ ಮಾರಾಟಕ್ಕೆ ಸಂಬಂಧಿಸಿ ಫೋರ್ಜರಿ ಹಾಗೂ ಕಂಪನಿ ಆಡಳಿತ ಮಂಡಳಿಯ ಠರಾವುಗಳನ್ನು ತಿರುಚಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿತ್ತು. ಆರೋಪಿಯ ವಿರುದ್ಧ ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಈ ಆರೋಪಿಯ ವಿರುದ್ಧ ಬಲವಂತದ ಕ್ರಮಕ್ಕೆ, ಬಂಧನಕ್ಕೆ ಮಧ್ಯಂತರ ತಡೆ ನೀಡಿ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಂಪನಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು