ಶುಕ್ರವಾರ, ಡಿಸೆಂಬರ್ 9, 2022
20 °C

ಸಕ್ಸೇನಾ ವಿರುದ್ಧ ಮಾನಹಾನಿಕರ ಆರೋಪ ಮಾಡದಂತೆ ಎಎಪಿಗೆ ದೆಹಲಿ ಹೈಕೋರ್ಟ್‌ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರ ವಿರುದ್ಧ ‘ಸುಳ್ಳು’ ಆರೋಪಗಳನ್ನು ಮಾಡದಂತೆ ಆಮ್‌ ಆದ್ಮಿ ಪಾರ್ಟಿ (ಎಎಪಿ) ನಾಯಕರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ, ಗವರ್ನರ್ ವಿರುದ್ಧದ ಮಾನಹಾನಿಕರ ಪೋಸ್ಟ್‌ಗಳು, ವಿಡಿಯೊಗಳು ಹಾಗೂ ಟ್ವೀಟ್‌ಗಳನ್ನು ಹಿಂಪಡೆಯುವಂತೆಯೂ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಬನ್ಸಲ್, ‘ಅರ್ಜಿದಾರರ ಪರವಾಗಿ ಈ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಲಾಗಿದೆ’ ಎಂದು ಪ್ರಕಟಿಸಿದರು. ಆದೇಶ ತಲುಪಿದ 48 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಎಎಪಿ ನಾಯಕರಿಗೆ ಸೂಚಿಸಲಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಚೇರಮನ್‌ ಆಗಿದ್ದ ಸಂದರ್ಭದಲ್ಲಿ, 2016ರಲ್ಲಿ ಸಕ್ಸೇನಾ ಅವರು ಅಮಾನ್ಯಗೊಂಡ ನೋಟುಗಳ ಚಲಾವಣೆ ಮಾಡಿದ್ದರು ಎಂದು ಎಎಪಿ ನಾಯಕರು ಆರೋಪಿಸಿದ್ದರು. ₹ 1,400 ಕೋಟಿಯಷ್ಟು ಅವ್ಯವಹಾರವಾಗಿರುವ ಈ ಹಗರಣದಲ್ಲಿ ಸಕ್ಸೇನಾ ಅವರೂ ಶಾಮೀಲಾಗಿದ್ದಾರೆ ಎಂದೂ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ, ಎಎಪಿ ಮುಖಂಡರಾದ ಆತಿಶಿ ಸಿಂಗ್, ಸೌರಭ್‌ ಭಾರದ್ವಾಜ್, ದುರ್ಗೇಶ್ ಪಾಠಕ್, ಸಂಜಯ್‌ ಸಿಂಗ್ ಹಾಗೂ ಜಾಸ್ಮಿನ್‌ ಶಾ ಅವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಸಕ್ಸೇನಾ ಹೈಕೋರ್ಟ್‌ ಮೊರೆ ಹೋಗಿದ್ದರು.

ತಮಗೆ ಆಗಿರುವ ಹಾನಿಗೆ ಸಂಬಂಧಿಸಿ, ಎಎಪಿ ಹಾಗೂ ಆ ಪಕ್ಷದ ಐವರು ನಾಯಕರಿಂದ ₹ 2.5 ಕೋಟಿ ಪರಿಹಾರ ಕೊಡಿಸಬೇಕು ಎಂದೂ ಸಕ್ಸೇನಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

‘ಸತ್ಯಮೇವ ಜಯತೆ’ ಟ್ವೀಟ್‌: ತಮ್ಮ ವಿರುದ್ಧ ‘ಸುಳ್ಳು ಆರೋಪ’ಗಳನ್ನು ಮಾಡದಂತೆ ಎಎಪಿ ಮುಖಂಡರಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್‌ ಆದೇಶಿಸಿದ ಬೆನ್ನಲ್ಲೇ, ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರು ‘ಸತ್ಯಮೇವ ಜಯತೆ’ ಎಂದು ಟ್ವೀಟ್‌ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು