ಬುಧವಾರ, ಆಗಸ್ಟ್ 17, 2022
23 °C

ಹೊಸ ಆಧಾರ್‌ ಸಂಖ್ಯೆ: ಕೇಂದ್ರ, ಯುಐಡಿಎಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ಹೊಸದಾಗಿ ಆಧಾರ್‌ ಸಂಖ್ಯೆ ನೀಡುವ ಪ್ರಕ್ರಿಯೆ ಹಾಗೂ ವಿಧಾನ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ (ಯುಐಡಿಎಐ) ದೆಹಲಿ ಹೈಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿತು.

ವರ್ತಕ ರಾಜನ್‌ ಅರೋರಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಈ ನೋಟಿಸ್‌ ಜಾರಿಗೊಳಿಸಿದರು.

‘ಆಧಾರ್ ಸಂಖ್ಯೆ ಹಾಗೂ ನೋಂದಣಿ ಸಮಯದಲ್ಲಿ ನೀಡಲಾಗಿದ್ದ ನನ್ನ ವೈಯಕ್ತಿಕ ವಿವರಗಳನ್ನು ಸೋರಿಕೆ ಮಾಡಲಾಗಿದೆ. ಇದರಿಂದ ನನ್ನ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿ ಅರೋರಾ ಅವರು ಅರ್ಜಿ ಸಲ್ಲಿಸಿದ್ದರು.

‘ಅರೋರಾ ಅವರಿಗೆ ಹೊಸದಾಗಿ ಆಧಾರ್‌ ಸಂಖ್ಯೆಯನ್ನು ನೀಡಬೇಕು. ವೈಯಕ್ತಿಕ ವಿವರಗಳ ಸೋರಿಕೆ ತಡೆಗಟ್ಟಲು ಹಾಗೂ ಮೂಲಭೂತ ಹಕ್ಕಾಗಿರುವ ಖಾಸಗಿತನದ ರಕ್ಷಣೆಗೂ ಕ್ರಮ ಕೈಗೊಳ್ಳುವಂತೆ ಯುಐಡಿಎಐಗೆ ನಿರ್ದೇಶನ ನೀಡಬೇಕು‘ ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.

‘ಹೊಸ ಆಧಾರ್ ಸಂಖ್ಯೆ ನೀಡಲು ಆಧಾರ್‌ ಕಾಯ್ದೆಯಡಿ ಅವಕಾಶ ಇದೆ. ಆದರೂ, ಪ್ರಾಧಿಕಾರ ನೀಡಲು ಮುಂದಾಗುತ್ತಿಲ್ಲ’ ಎಂದೂ ಅರ್ಜಿದಾರರು ವಿವರಿಸಿದ್ದರು.

ಯುಐಡಿಎಐ ಪರ ವಕೀಲ ಝೋಹೆಬ್‌ ಹುಸೇನ್‌, ‘ಆಧಾರ್‌ ಸಂಖ್ಯೆಯನ್ನು ನೀಡಿದ ತಕ್ಷಣ, ವ್ಯಕ್ತಿಗೆ ಸಂಬಂಧಿಸಿದ ವಿವರಗಳು ಹಾಗೂ ಆ ಸಂಖ್ಯೆ ಜೀವತಾವಧಿಗೆ ಲಾಕ್‌ ಆಗಿರುತ್ತವೆ’ ಎಂದು ಹೈಕೋರ್ಟ್‌ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್‌, ‘ಹಾಗಿದ್ದರೆ, ಈಗಾಗಲೇ ಕಾರ್ಡು ಹೊಂದಿರುವವರಿಗೆ ಹೊಸದಾಗಿ ಆಧಾರ್‌ ಸಂಖ್ಯೆ ನೀಡಲು ಯುಐಡಿಎಐ ಕಾಯ್ದೆಯ ಸೆಕ್ಷನ್‌ 23 (ಎನ್‌) ಅಡಿ ಪ್ರಾಧಿಕಾರಕ್ಕೆ ಅಧಿಕಾರವನ್ನೇ ನೀಡುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿತು.

‘ನಿಯಮಗಳ ಪಾಲನೆಯಾಗಲೇ ಬೇಕು. ನಿಯಮಗಳನ್ನು ಮನಬಂದಂತೆ ಬದಲಾಯಿಸಲು ಸಾಧ್ಯವಿಲ್ಲ. ಕಾಯ್ದೆಯಲ್ಲಿ ಉಲ್ಲೇಖಿಸಿದ ರೀತಿಯಲ್ಲಿಯೇ ಅದನ್ನು ಜಾರಿಗೊಳಿಸಬೇಕು’ ಎಂದೂ ಹೇಳಿತು.

‘ಅಲ್ಲದೇ, ಕಾರ್ಡ್‌ದಾರರ ಇಚ್ಛೆ ಅಥವಾ ಖುಷಿಗಾಗಿ ಆಧಾರ್‌ ಸಂಖ್ಯೆ ಬದಲಾಯಿಸಬಾರದು ಎಂಬುದೂ ಸರಿ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ರೇಖಾ ಪಲ್ಲಿ, ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು