ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧತೆ: ಸಚಿವ ಸುಧಾಕರ್

Last Updated 21 ನವೆಂಬರ್ 2020, 10:27 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ. ಬಂದಾಗ ಸಂಗ್ರಹಣೆಗೋಸ್ಕರ ಎಲ್ಲ ಜಿಲ್ಲೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ‌.ಕೆ. ಸುಧಾಕರ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯವರು ಹಾಗೂ ಪ್ರಧಾನಿ ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪನಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಕ್ಷಿಪ್ರವಾಗಿ ಮೂರನೇ ಹಂತ ತಲುಪಿದ ಕಂಪನಿ ಜೊತೆ ಕೇಂದ್ರ ಸಮಾಲೋಚನೆ ನಡೆಸಿದೆ. ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಒಡಂಬಡಿಕೆ ಕೂಡ ಮಾಡಿಕೊಂಡಿದೆ ಎಂದು ತಿಳಿಸಿದರು.

‘ಯಾವ ಕಂಪನಿಯ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಧಿಕೃತ ಎಂದು ಘೋಷಣೆ ಮಾಡುತ್ತದೆಯೋ ನಂತರ ಲಸಿಕೆ ಸಿಗುತ್ತದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ದೊರೆಯುತ್ತದೆ’ ಎಂದರು.

‘ಕೋವಿಡ್ ಲಸಿಕೆ ಬಂದ ಮೇಲೆ ವಿತರಣೆಯಲ್ಲಿ ವಿಳಂಬ ಆಗಬಾರದೆಂದು ಸಕಲ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಲಸಿಕೆ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳನ್ನು ತರುತ್ತಿದ್ದೇವೆ.‌ ಅಂತಾರರಾಷ್ಟ್ರೀಯ ಗುಣಮಟ್ಟದ 108 ಆಂಬುಲೆನ್ಸ್ ಸೇವೆ ನೀಡಲು ಸಿದ್ಧತೆ ನಡೆದಿದೆ’ ಎಂದರು.

‘ಕೋವಿಡ್ ವಿಷಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾವು ಯಾರೂ ಹೊರತಾಗಿಲ್ಲ. ಪದವಿ ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ ಎಂಬ ನಿಖರ ಮಾಹಿತಿ ಇಲ್ಲ. ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ’ ಎಂದರು.

ಎಲ್ಲ ಪಿಎಚ್‌ಸಿಗಳಲ್ಲೂ 24x7 ಸೇವೆ
ಬೆಳಗಾವಿ:
‘ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಡಿ)ಗಳಲ್ಲೂ 24×7 ಸೇವೆ ದೊರೆಯುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಆರೋಗ್ಯ ಮತ್ತು ‌ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ, ಜನವರಿಯಿಂದ ಎಲ್ಲ ರೀತಿಯ ಪರೀಕ್ಷೆಗಳನ್ನೂ ಸಂಪೂರ್ಣ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ. ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳನ್ನೂ ಉಚಿತವಾಗಿ ಮಾಡಲಾಗುವುದು. ಚೀಟಿ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಯಾವುದೇ ಔಷಧಿ ಅಗತ್ಯವಿದ್ದರೂ ಪೂರೈಸುತ್ತಿದ್ದೇವೆ. ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಜನಸಂಖ್ಯೆ ಅಧರಿಸಿ ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭ ಹಾಗೂ ಆಂಬುಲೆನ್ಸ್‌ ಸೇವೆ ಬಲವರ್ಧನೆಗೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್ ಸಂದರ್ಭದಲ್ಲಿ ಎದುರಾದ ಆಕ್ಸಿಜನ್ ಕೊರತೆ ಕಾರಣದಿಂದಾಗಿ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಮೆಡಿಕಲ್ ಆಕ್ಸಿಜನ್ ಘಟಕ ಆರಂಭಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯ ವೃದ್ಧಿಗೆ ಕೋವಿಡ್-19 ಕೂಡ ಪಾಠ ಕಲಿಸಿದಂತಾಗಿದೆ’ ಎಂದರು.

‘ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಮುಂಬರುವ ದಿನಗಳಲ್ಲಿ ವಿಲೀನಗೊಳಿಸಿ ಒಂದೇ ಇಲಾಖೆ ರೂಪಿಸುವ ಚಿಂತನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT