ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪರ್ಯಾಯ ಮಾರ್ಗ?

ಉಕ್ರೇನ್‌ನಿಂದ ಹಿಂದಿರುಗಿರುವ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ: ಶೀಘ್ರದಲ್ಲೇ ಮಹತ್ವದ ಸಭೆ
Last Updated 4 ಮಾರ್ಚ್ 2022, 14:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉಕ್ರೇನ್‌ನಿಂದ ವಾಪಸಾಗಿರುವ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ ಅನ್ನು ದೇಶದಲ್ಲಿ ಅಥವಾ ಅನ್ಯ ವಿದೇಶದಲ್ಲಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ.

ಪರ್ಯಾಯ ಮಾರ್ಗಗಳತ್ತ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಚರ್ಚೆ ಆರಂಭಿಸಿದ್ದು, ಪೂರಕವಾಗಿ ಸದ್ಯ ಇರುವ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದೆ.

ಎನ್‌ಎಂಸಿ, ಆರೋಗ್ಯ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ವಿಷಯವನ್ನು ಚರ್ಚಿಸಲು ಶೀಘ್ರದಲ್ಲಿಯೇ ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಈಗ ಎದುರಾಗಿರುವ ವಿಶೇಷ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಈ ಅಂಶವನ್ನು ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚರ್ಚೆ ಆರಂಭ: ‘ಎನ್‌ಎಂಸಿ (ವಿದೇಶಿ ವೈದ್ಯ ಪದವಿ ಪರವಾನಗಿ) ನಿಯಮಗಳು 2021’ ಅನ್ನು ಸಡಿಲಿಸುವ ಸಾಧ್ಯತೆಗಳ ಕುರಿತು ಆರೋಗ್ಯ ಸಚಿವಾಲಯ ಮತ್ತು ಎನ್‌ಎಂಸಿ ಈಗಾಗಲೇ ಚರ್ಚೆಯನ್ನು ಆರಂಭಿಸಿವೆ ಎಂದು ತಿಳಿಸಿವೆ.

ಉಕ್ರೇನ್ ಬೆಳವಣಿಗೆಯಿಂದಾಗಿ ಬಾಧಿತರಾಗಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅನ್ನು ಸ್ಥಳೀಯವಾಗಿ ಖಾಸಗಿ ಕಾಲೇಜುಗಳಲ್ಲಿ ಪೂರ್ಣಗೊಳಿಸಲು ಅಥವಾ ಬೇರೆ ವಿದೇಶವೊಂದರ ಕಾಲೇಜಿಗೆ ಪ್ರವೇಶವನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆಗಳ ಕುರಿತಂತೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪರ್ಯಾಯ ಮಾರ್ಗಗಳನ್ನು ಹುಡುಕಲು ಹೆಚ್ಚು ಚಿಂತನೆ ನಡೆಸಬೇಕಾದ ಹಾಗೂ ವಿಸ್ತೃತವಾಗಿ ಚರ್ಚೆಯನ್ನು ನಡೆಸಬೇಕಾಗಿರುವ ಅಗತ್ಯವಿದೆ. ಈಗಿನ ಸಂದರ್ಭ ಗಮನದಲ್ಲಿಟ್ಟಕೊಂಡೇ ಈ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ವಿವರಿಸಿವೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ (ವಿದೇಶಾಂಗ ವೈದ್ಯಕೀಯ ಪದವಿ ಪರವಾನಗಿ) 2021ರಂತೆ, ವಿದ್ಯಾರ್ಥಿಗಳು ತರಬೇತಿ, ಇಂಟರ್ನ್‌ಷಿಪ್ ಸೇರಿದಂತೆ ಇಡೀ ಕೋರ್ಸ್‌ ಅನ್ನು ವಿದೇಶದ ಒಂದೇ ಸಂಸ್ಥೆಯಿಂದ ಪೂರ್ಣಗೊಳಿಸುವುದು ಕಡ್ಡಾಯ. ಭಾಗಶಃ ಇಂಟರ್ನ್‌ಷಿಪ್ ಅಥವಾ ತರಬೇತಿಯನ್ನು ಭಾರತ ಅಥವಾ ಇನ್ನಾವುದೇ ದೇಶದಲ್ಲಿ ಮಾಡಲುನಿಯಮಗಳಲ್ಲಿ ಅವಕಾಶವಿಲ್ಲ.

ಉಕ್ರೇನ್‌ನಲ್ಲಿ ಸದ್ಯ ಆರು ವರ್ಷದ ಎಂಬಿಬಿಎಸ್‌ ಕೋರ್ಸ್‌ ಮತ್ತು ಎರಡು ವರ್ಷದ ಇಂಟರ್ನ್‌ಷಿಪ್ ಕಾರ್ಯಕ್ರಮ ಇದೆ. ಭಾರತದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ ಹೋಲಿಸಿದರೆ, ಇಲ್ಲಿ ಶಿಕ್ಷಣ ಕೈಗೆಟುಕುವ ದರದಲ್ಲಿ ಇದೆ. ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿದ್ದು, ಅವರ ಶಿಕ್ಷಣದ ಭವಿಷ್ಯ ಈಗ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT