ಶನಿವಾರ, ಡಿಸೆಂಬರ್ 4, 2021
24 °C
ಕೇರಳದಲ್ಲಿ ಉಕ್ಕಿ ಹರಿದ ನದಿಗಳು

ಕೇರಳದಲ್ಲಿ ಭಾರಿ ಮಳೆ, 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್; ಭೂಕುಸಿತಕ್ಕೆ 10 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ: ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.‌ ಮಳೆ ಸಂಬಂಧಿತ ಅವಘಡದಲ್ಲಿ 10 ಜನರು ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ.

ರಾಜ್ಯದ ದಕ್ಷಿಣ ಮತ್ತು ಮಧ್ಯ ಭಾಗದ ಹಲವಾರು ಪ್ರದೇಶಗಳು ಶನಿವಾರ ಜಲಾವೃತವಾಗಿವೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.  ಪಟ್ಟಣಂತಿಟ್ಟ, ಕೋಟಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದೆ.

ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡು, ಮಲಪ್ಪುರಂ, ಕೋಯಿಕೋಡ್‌ ಮತ್ತು ವಯನಾಡು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಆ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.


ಜಲಾವೃತವಾದ, ತಿರುವನಂತಪುರಂನ ವೇಲಾಯನಿ ಕಾಕ್ಕಮೂಲ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ನಾಯಿಯನ್ನು ಹೊತ್ತುಕೊಂಡು ರಸ್ತೆ ದಾಟುತ್ತಿರುವ ದೃಶ್ಯ

ಆಗ್ನೇಯ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಅ.18ರಿಂದ ಭಾರಿ ಮಳೆ ಸುರಿಯಲಿದ್ದು, ಅ.19ರ ಬೆಳಿಗ್ಗೆ ಮಳೆಯ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ

ನಯ್ಯಾರ್‌ ಹಾಗೂ ಅರುವಿಕ್ಕರ ಅಣೆಕಟ್ಟೆಗಳ ಗೇಟ್ ತೆರೆಯಲಾಗಿದೆ. ಕೊಲ್ಲಂ, ಕೊಟ್ಟಾಯಂ ಸೇರಿ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಹಾನಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಕುತ್ತನಾಡು ಪ್ರದೇಶ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ ಅಲ್ಲಲ್ಲಿ ಭಾರಿ ನೀರು ನಿಂತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತ್ರಿಶೂರಿನ ತಗ್ಗು ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಮೀನುಗಾರ ದೋಣಿಗಳಿಗೆ ಸಮುದ್ರಕ್ಕಿಳಿಯಲು ಅನುವು ಮಾಡಿಲ್ಲ.

ಮಕ್ಕಳು ಪಾರು: ತಿರುವನಂತಪುರಂ ಬಳಿಯ ಚಂಪಕಮಂಗಳಂ ಎಂಬಲ್ಲಿ ಮಳೆಯಿಂದ ಮನೆಯೊಂದರ ಒಂದು ಭಾಗ ಶುಕ್ರವಾರ ಕುಸಿದಿದ್ದು, ಗೋಡೆಯಡಿ ಸಿಲುಕಿದ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಕಾರೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅದರಲ್ಲಿದ್ದ ಮಹಿಳೆ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಪ್ರವಾಸಿ ಸ್ಥಳಗಳಿಗೆ, ನದಿ, ಜಲ ಮೂಲಗಳ ಬಳಿ ತೆರಳದಂತೆ ತಿರುವನಂತಪುರಂ ಜಿಲ್ಲಾಧಿಕಾರಿ ನವಜೋತ್‌ ಖೋಸ್‌ ಸೂಚನೆ ನೀಡಿದ್ದಾರೆ.

ಕೋಟ್ಟಾಯಂ: ಬಸ್‌ ಪ್ರಯಾಣಿಕರ ರಕ್ಷಣೆ

ತಿರುವನಂತಪುರಂ: ಕೋಟ್ಟಾಯಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆ, ಮಕ್ಕಳು ಸೇರಿ ಆರು ಜನರು ಮೃತಪಟ್ಟಿದ್ದು, ಐದು ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಪೂರ್ವ ಭಾಗದ ಕೂಟ್ಟಿಕ್ಕಲ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯ ಇತರ ಪ್ರದೇಶಗಳಾದ ಕಂಜಿರಾಪಳ್ಳಿ ಮತ್ತು ಪೂಂಜಾರ್‌ನಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಕಾರಣ ಜಿಲ್ಲೆಯ ಪ್ರಮುಖ ಪಟ್ಟಣ ಪಾಲದಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಕೋಟ್ಟಾಯಂನಲ್ಲಿ ಪ್ರಯಾಣಿಕರಿದ್ದ ಬಸ್ಸೊಂದು ನೀರಿನಲ್ಲಿ ಸಿಲುಕಿತ್ತು. ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಹಲವಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ ಎಂಬ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ ಎಂಟು ಜನರು ಕಾಣೆಯಾಗಿದ್ದಾರೆ. ಅವರಲ್ಲಿ ಐವರು ಮಕ್ಕಳು ಇದ್ದಾರೆ. ರಕ್ಷಣಾ ಕಾರ್ಯಕರ್ತರಿಗೆ ಆ ಸ್ಥಳವನ್ನು ತಲುಪಲು ಸಾಧ್ಯವಾಗುತ್ತಿಲ್ಲ.


ಕೋಟಯಂನಲ್ಲಿ ಪ್ರಯಾಣಿಕರಿದ್ದ ಬಸ್ಸೊಂದು ನೀರಿನಲ್ಲಿ ಭಾಗಶಃ ಮುಳುಗಿತ್ತು (ಪಿಟಿಐ ಚಿತ್ರ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು