ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಮತ್ತೆ ಭೂಕುಸಿತ, ಕೊಚ್ಚಿಹೋದ ಸೇತುವೆ, ಹೆದ್ದಾರಿಗಳು!

ಭಾರಿ ಮಳೆ: ಕೊಚ್ಚಿಹೋದ ಸೇತುವೆ, ಹೆದ್ದಾರಿಗಳು l ವಾಹನ ಸಂಚಾರ ಸ್ಥಗಿತ
Last Updated 27 ಆಗಸ್ಟ್ 2021, 20:51 IST
ಅಕ್ಷರ ಗಾತ್ರ

ಡೆಹ್ರಾಡೂನ್‌ : ಉತ್ತರಾ ಖಂಡವು ಮಳೆಗೆ ಮತ್ತೆ ನಲುಗಿದೆ. ರಾಜ್ಯದಾದ್ಯಂತ‌ ಗುರುವಾರ ರಾತ್ರಿಯಿಡೀ ಭಾರಿ ಮಳೆಯಾಗಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ.

ಹೃಷಿಕೇಶ–ಗಂಗೋತ್ರಿ (ಎನ್‌ಎಚ್–94) ಹಾಗೂ ಹೃಷಿಕೇಶ–ಬದ್ರಿನಾಥ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–58) ಬಹುತೇಕ ಹಾನಿಗೀಡಾಗಿವೆ. ಈ ಹೆದ್ದಾರಿಗಳು ಸಂಪೂರ್ಣ ದುರಸ್ತಿಗೊಳ್ಳುವವರೆಗೆ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನರೇಂದ್ರ ನಗರದಿಂದ ಚಾಂಬಾ ವರೆಗೆ ಹಾಗೂ ತಪೋವನದಿಂದ ಮಲೇಥಾವರೆಗೆ ಹೃಷಿಕೇಶ–ಬದ್ರಿನಾಥ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಟೆಹ್ರಿ ಜಿಲ್ಲಾಧಿಕಾರಿ ಇವಾ ಆಶಿಶ್ ಶ್ರೀವಾತ್ಸವ ತಿಳಿಸಿದ್ದಾರೆ.

ಜಿಲ್ಲೆಯ ಫಾಕೋಟ್‌ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ–94ರ ಬಹು ಭಾಗವು ಕುಸಿದುಬಿದ್ದಿದ್ದು, ಹಲವಾರು ಕಡೆ ಭೂಕುಸಿತದ ಅವಶೇಷಗಳು, ದೊಡ್ಡ ಬಂಡೆಗಳು ರಸ್ತೆ ಮೇಲೆ ಉರುಳಿ ಬಿದ್ದು ತೊಂದರೆಯಾಗಿದೆ.

ಹೆದ್ದಾರಿಯ ಸಾಕಷ್ಟು ಕಡೆಗಳಲ್ಲಿ ಬಿರುಕುಗಳೂ ಉಂಟಾಗಿದ್ದು, ಮತ್ತಷ್ಟು ಹಾನಿಯಾಗುವ ಆತಂಕ ಎದುರಾಗಿದೆ. ಬೀಮುಂಡಾ ಮತ್ತು ಸೋನಿ ಗ್ರಾಮಗಳ ಬಳಿ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿವೆ.

ಡೆಹ್ರಾಡೂನ್‌ನ ಸಹಸ್ರಧಾರಾ-ಮಾಲ್‌ದೇವತಾ ರಸ್ತೆಯೂ ಬಹುತೇಕ ಹಾಳಾಗಿದೆ. ಡೆಹ್ರಾಡೂನ್‌–ಹೃಷಿಕೇಶ ಹೆದ್ದಾರಿಯಲ್ಲಿನ ರಾಣಿ ಪೋಖರಿ ಸೇತುವೆ ಕುಸಿದುಬಿದ್ದಿದ್ದು, ಹಲವು ವಾಹನಗಳು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ರಾಯಪುರ ಶಾಸಕ ಉಮೇಶ ಶರ್ಮಾ ಕಾವು, ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ:

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಸಿಯಾಂಗ್‌ ಜಿಲ್ಲೆಯಲ್ಲಿನ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ‌ರಸ್ತೆ, ಸೇತುವೆಗಳು ಹಾನಿಗೀಡಾಗಿವೆ. ಕೃಷಿ, ತೋಟಗಾರಿಕೆ ಬೆಳೆಗಳು ಹಾಗೂ ಬಿದಿರಿನ ತೋಪುಗಳಲ್ಲಿ ನೀರು ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜನ
ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದ ಸಂಕಷ್ಟಕ್ಕೀಡಾದವರಿಗೆ ತುರ್ತು ನೆರವಿನ ಭರವಸೆಯನ್ನು ಸ್ಥಳೀಯ ಶಾಸಕರು ನೀಡಿದ್ದಾರೆ.

ಸಿಮಾಂಗ್‌ ನದಿಯ ಪ್ರವಾಹದಿಂದಾಗಿ ಜಿಲ್ಲೆಯ ಸಂಪರ್ಕ ವ್ಯವಸ್ಥೆಯೇ ಸಂಪೂರ್ಣ ನೆಲಕಚ್ಚಿದ್ದಾಗಿ ಸಿಯಾಂಗ್‌ ಜಿಲ್ಲಾಧಿಕಾರಿ ಅತುಲ್‌ ತಾಯೆಂಗ್ ಹೇಳಿದ್ದಾರೆ. ಜನರಲ್‌ ರಿಸರ್ವ್‌ ಎಂಜಿನಿಯರ್‌ ಫೋರ್ಸ್‌ (ಜಿಆರ್‌ಇಎಫ್‌) ಕಾರ್ಮಿಕ ಶಿಬಿರವನ್ನು ಸ್ಥಳಾಂತರಿಸಲಾಗಿದೆ ಹಾಗೂ 550 ಜನರಿಗೆ ಬೊಲ್ಯಾಂಗ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ
ಕಲ್ಪಿಸಲಾಗಿದೆ.

ನದಿ ದಂಡೆಯಲ್ಲಿರುವ ಬಹುತೇಕ ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನದಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇರುವುದರಿಂದ, ತಗ್ಗು ಪ್ರದೇಶಗಳಲ್ಲಿರುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಸುಪ್ಲೆ ಗ್ರಾಮದಿಂದ ಆರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬೈಲೆ ಸೇತುವೆ ಕೊಚ್ಚಿ ಹೋಗಿದೆ.

ವಿದ್ಯುತ್‌ ವಿತರಣಾ ಜಾಲದ ತಂತಿಗಳು ನೆಲಕ್ಕೆ ಬಿದ್ದಿವೆ. ಭೂಕುಸಿತದಿಂದಾಗಿ, ಸುಬ್ಬಂಗ್‌ ಜಲವಿದ್ಯುತ್‌ ಘಟಕದ ಕಾರ್ಯನಿರ್ವಹಣೆಯೂ ಸ್ಥಗಿತಗೊಂಡಿದೆ. ಪೂರ್ವ ಸಿಯಾಂಗ್‌ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಿದ್ದ ತಡೆಗೋಡೆಯು ಕೊಚ್ಚಿ
ಹೋಗಿದೆ.

ಬೋರ್ಗುಲಿ ಗ್ರಾಮದ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ವಸತಿನಿಲಯವೂ ಕೊಚ್ಚಿ ಹೋಗಿದ್ದು, ಸಾರ್ವಜನಿಕ ಮೈದಾನವೂ ಹಾಳಾಗಿದೆ.

10 ಗ್ರಾಮಗಳಲ್ಲಿನ 15 ಸಾವಿರ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರು ಹಾಗೂ ವಿದ್ಯುತ್‌ ಪೂರೈಕೆ ಕೂಡ ಅಲ್ಲಿ ಅಸಾಧ್ಯವಾಗಿ ಪರಿಣಮಿಸಿದೆ ಎಂದು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT