ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ಇದ್ದರೆ ನನ್ನನ್ನು ಬಂಧಿಸಿ: ಕೇಂದ್ರ ಸರ್ಕಾರಕ್ಕೆ ಜಾರ್ಖಂಡ್ ಸಿಎಂ ಸವಾಲು

Last Updated 3 ನವೆಂಬರ್ 2022, 13:29 IST
ಅಕ್ಷರ ಗಾತ್ರ

ರಾಂಚಿ: ‘ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ನನ್ನನ್ನು ವಿಚಾರಣೆ ನಡೆಸುವುದಕ್ಕಿಂತ, ನಿಮಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಅವರ ಮೇಲೆ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಆರೋಪ ಇದ್ದು, ಪ್ರಕರಣ ಸಂಬಂಧ ನವೆಂಬರ್‌ 3ಕ್ಕೆ ವಿಚಾರಣೆಗೆ ಹಾಜರಾಗಿ ಎಂದು ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿತ್ತು.

ಆದರೆ ವಿಚಾರಣೆಗೆ ಗೈರು ಹಾಜರಾದ ಅವರು, ರಾಂಚಿಯಲ್ಲಿರುವ ತಮ್ಮ ನಿವಾಸದ ಮುಂದೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ವಿರುದ್ಧ ಅವರು ಹರಿಹಾಯ್ದರು.

‘ಒಂದು ವೇಳೆ ನಾನು ತಪ್ಪಿತಸ್ಥನಾಗಿದ್ದರೆ ವಿಚಾರಣೆ ಯಾಕೆ ಮಾಡುತ್ತೀರಿ? ನಿಮಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ’ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ ಜಾರಿ ನಿರ್ದೇಶನಾಲಯದ ಈ ನಡೆ ‘ ಬುಡಕಟ್ಟು ಮುಖ್ಯಮಂತ್ರಿಗೆ ಕಿರುಕುಳ ನೀಡುವ ಸಂಚಿನ ಭಾಗ’ ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೇ ಈ ಸಂಚಿಗೆ ಸೂಕ್ತವಾದ ಉತ್ತರ ಸಿಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡುತ್ತಿದೆ. ಸಿಬಿಐ ಹಾಗೂ ಇಡಿಗೆ ನಾನು ಹೆದರುವುದಿಲ್ಲ. ತಮ್ಮನ್ನು ವಿರೋಧಿಸುವ ಪ್ರತಿಯೊಬ್ಬರನ್ನು ಸದ್ದಡಗಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಮ್ಮ ಬೆಂಬಲಿಗರ ಮುಂದೆ ಮಾಡಿದ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ‘ನಾನು ಇ.ಡಿ ವಿಚಾರಣೆಗೆ ಹಾಜರಾಗುವುದಿಲ್ಲ. ರಾಯ್ಪುರದಲ್ಲಿ ನಡೆಯುವ ಬುಡಕಟ್ಟು ಸಮಾವೇಶಕ್ಕೆ ಹೋಗಲಿದ್ದೇನೆ. ಬ್ಯಾಂಕುಗಳಲ್ಲಿ ಸಾಲ ಮಾಡಿ ಮರುಪಾವತಿ ಮಾಡದೇ ಮೋಸ ಮಾಡಿರುವ ಉದ್ಯಮಿಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಸುಮ್ಮನೆ ಬಿಟ್ಟಿದೆ. ರಾಜಕೀಯ ಹಗೆಯ ಭಾಗವಾಗಿ ನಮ್ಮನ್ನು ಗುರಿ ಮಾಡಿಕೊಂಡಿದೆ’ ಎಂದು ಅವರು ಹರಿಹಾಯ್ದಿದ್ದಾರೆ.

ಸೊರೇನ್‌ ಮೇಲಿರುವ ಆರೋಪ ಏನು?
2021ರಲ್ಲಿ ತಮಗೆ ತಾವೇ ಅಕ್ರಮವಾಗಿ ಗಣಿಯನ್ನು ಲೀಸ್‌ಗೆ ಪಡೆದುಕೊಂಡಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ದೂರು ಸಲ್ಲಿಸಿತ್ತು. ಇದೇ ಪ್ರಕರಣ ಸಂಬಂಧ ಅವರ ಶಾಸಕ ಸ್ಥಾನವನ್ನು ರದ್ದು ಮಾಡಬೇಕು ಎಂದು ಚುನಾವಣಾ ಆಯೋಗ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾಗಿ ವರದಿಯಾಗಿದ್ದವು.

ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸೊರೆನ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT