ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ವಿಳಂಬದಿಂದ ಕರ್ನಾಟಕದಲ್ಲಿ ಹೆದ್ದಾರಿ ಕಾಮಗಾರಿ ನಿಧಾನ: ನಿತಿನ್ ಗಡ್ಕರಿ

Last Updated 30 ಮಾರ್ಚ್ 2022, 13:41 IST
ಅಕ್ಷರ ಗಾತ್ರ

ನವದೆಹಲಿ: ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಅರಣ್ಯ ಇಲಾಖೆಯಿಂದ ಮೊದಲೇ ಅನುಮತಿ ಪಡೆಯದಿರುವುದು ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಿಧಾನಗೊಳ್ಳಲು ಕಾರಣ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬುಧವಾರ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು 2018–19ರಲ್ಲಿ 1,038 ಕಿ.ಮೀ., 2019–20ರಲ್ಲಿ 777 ಕಿ.ಮೀ. ಆಗಿದ್ದರೆ, 2020–21ರಲ್ಲಿ ಕೇವಲ 671 ಕಿ.ಮೀ. ಅಷ್ಟೇ ನಿರ್ಮಾಣವಾಗಿತ್ತು. ಇದಕ್ಕೆ ಭೂಸ್ವಾಧೀನ ವಿಳಂಬವಾಗಿರುವುದು ಮಾತ್ರವಲ್ಲದೆ ಪರಿಸರ ಇಲಾಖೆಯ ಅನುಮತಿ, ಕಲ್ಲುಗಣಿಗಾರಿಕೆ, ನಿರ್ಮಾಣಕ್ಕೆ ಅಗತ್ಯವಿರುವ ಮಣ್ಣು, ಮರಳು ಗಣಿಗಾರಿಕೆಗೆ ಮೊದಲೇ ಅನುಮತಿ ಪಡೆಯದಿರುವುದು ಕೂಡ ಕಾರಣ ಎಂದು ವಿವರಿಸಿದ್ದಾರೆ.

ಕಾಮಗಾರಿಗಳನ್ನು ತ್ವರಿತಗೊಳಿಸಲು ರಸ್ತೆ ಸಾರಿಗೆ ಸಚಿವಾಲಯವು ಯಾವ ಪ್ರಯತ್ನಗಳನ್ನು ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಅರಣ್ಯ ಇಲಾಖೆಯ ಅನುಮತಿ, ಭೂಸ್ವಾಧೀನ ಮೊದಲಾದವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ ಎಂದೂ ಹೇಳಿದರು.

ಕರ್ನಾಟಕದ ಲೋಕೋಪಯೋಗಿ ಇಲಾಖೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕುರಿತು ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದೆ ಎಂದೂ ತಿಳಿಸಿದ್ದಾರೆ. 2021–22ರಲ್ಲಿ 17 ಹಾಗೂ 2022–23ರಲ್ಲಿ 43 ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT