ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌: ಭಿನ್ನಮತದ ತೀರ್ಪು; ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಶಿಫಾರಸು

ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗೆ ಶಿಫಾರಸು
Last Updated 13 ಅಕ್ಟೋಬರ್ 2022, 19:51 IST
ಅಕ್ಷರ ಗಾತ್ರ

ನವದೆಹಲಿ:ಶಾಲಾ–ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನಮತದ ತೀರ್ಪು ನೀಡಿದೆ.

ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.10 ದಿನಗಳ ಕಾಲ ವಾದ–ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್‌ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಬೆಳಿಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಿತು.

ನ್ಯಾಯಮೂರ್ತಿ ಹೇಮಂತ್‌ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದರು.

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್‌ ನಿಷೇಧಿಸಿಕರ್ನಾಟಕ ಸರ್ಕಾರ ಹೊರಡಿಸಿರುವ ಫೆಬ್ರುವರಿ 5ರ ಅಧಿಸೂಚನೆಯನ್ನು ರದ್ದುಪಡಿಸಿದರು. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯ ತಳೆದರು. ಆದ್ದರಿಂದ ಪ್ರಕರಣದ ವಿಚಾರಣೆಗೆ ವಿಸ್ತೃತ ಪೀಠ ರಚಿಸುವಂತೆ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಿತು.

‘ಅಗತ್ಯ ಧಾರ್ಮಿಕ ಪದ್ಧತಿ ಕುರಿತು ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ ಮತ್ತು ಹೈಕೋರ್ಟ್‌ ತಪ್ಪು ನಿರ್ಧಾರ ಕೈಗೊಂಡಿದೆ’ ಎಂದು ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟರು. ‘ಹಿಜಾಬ್‌ ಧರಿಸುವುದು ಆಯ್ಕೆಗೆ ಬಿಟ್ಟಿದ್ದು. ಅದಕ್ಕಿಂತ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ’ ಎಂದಿರುವ ಅವರು, ’ಇಂತಹ ನಿರ್ಬಂಧಗಳನ್ನು ಹೇರುವ ಮೂಲಕ ನಾವು ವಿದ್ಯಾರ್ಥಿನಿಯರ ಜೀವನ ಸುಧಾರಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’ ಎಂದರು.

’ಹೆಣ್ಣು ಮಕ್ಕಳಿಗೆ ಶಾಲೆ ಗೇಟ್‌ ಪ್ರವೇಶಿಸುವ ಮುನ್ನ ಹಿಜಾಬ್‌ ತೆಗೆಯುವಂತೆ ಹೇಳುವುದು ಮೊದಲಿಗೆ ಆಕೆಯ ಖಾಸಗೀತನ, ನಂತರ ಆಕೆಯ ಘನತೆಯ ಮೇಲೆ ಧಕ್ಕೆ ತಕ್ಕಂತೆ. ಕೊನೆಗೆ, ಆಕೆಗೆ ಜಾತ್ಯತೀತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಸಂವಿಧಾನದ ಪರಿಚ್ಛೇದ 19 (1) (ಎ) ರ ಅಭಿವ್ಯಕ್ತಿ ಸ್ವಾತಂತ್ರ್ಯ, ಪರಿಚ್ಛೇದ 21ರ ಜೀವಿಸುವ ಹಕ್ಕು ಮತ್ತು ಪರಿಚ್ಛೇದ 25 (1) ರ ಧಾರ್ಮಿಕ ಆಚರಣೆ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ’ ಎಂದು ಅವರು ಹೇಳಿದರು.

ಇನ್ನೊಂದೆಡೆ, ನ್ಯಾಯಮೂರ್ತಿ ಹೇಮಂತ್‌ ಗುಪ್ತ, ‘ವಿದ್ಯಾರ್ಥಿಗಳು ತಮಗೆ ಶಿಕ್ಷಣದ ಹಕ್ಕು ಇದ್ದು, ಅದನ್ನು ತಮ್ಮ ಇಚ್ಛೆ ಹಾಗೂ ತಮಗೆ ಇಷ್ಟವಾದ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ ಎಂದು ಹೇಳಲಾಗದು’ ಎಂದರು.

‘ಜಾತ್ಯತೀತತೆ ಎಲ್ಲ ಪ್ರಜೆಗಳಿಗೆ ಅನ್ವಯವಾಗುತ್ತದೆ. ಆದ್ದರಿಂದ ಒಂದು ಧಾರ್ಮಿಕ ಸಮುದಾಯಕ್ಕೆ ಅವರ ಧಾರ್ಮಿಕ ಚಿಹ್ನೆಗಳನ್ನು ಬಳಸಲು ಅನುಮತಿ ನೀಡುವುದು ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ, ಸರ್ಕಾರದ ಆದೇಶವನ್ನು ಜಾತ್ಯತೀತ ಅಥವಾ 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಉದ್ದೇಶಗಳ ಉಲ್ಲಂಘನೆ ಅಲ್ಲ’ ಎಂದರು. ‘ಅಲ್ಲದೆ, ರಾಜ್ಯ ಸರ್ಕಾರದ ಅನುದಾನದಿಂದ ನಡೆಯುವ ಜಾತ್ಯತೀತ ಶಾಲೆಗಳಲ್ಲಿ ಧಾರ್ಮಿಕ ನಂಬಿಕೆಗಳಿಗೆ ಅವಕಾಶ ನೀಡಲಾಗದು’ ಎಂದು ಅವರು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡರು.

‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್‌ 15ರಂದು ತಿರಸ್ಕರಿಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ 22 ಅರ್ಜಿದಾರರು, ‘ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ಕರ್ನಾಟಕಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್‌ ಧರಿಸುವುದನ್ನು ನಿಷೇಧಿಸಿರುವುದು ಸರಿಯಲ್ಲ. ಹಿಜಾಬ್‌ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೋಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್‌ ಪ್ರಮಾದವೆಸಗಿದೆ’ ಎಂದು ಆಕ್ಷೇಪಿಸಿದ್ದರು.

ಹಿಜಾಬ್‌ ಹಕ್ಕು ಶಾಲಾ ಗೇಟ್‌ ಬಳಿ ಮೊಟಕುಗೊಳ್ಳಲ್ಲ: ಧುಲಿಯಾ

‘ಹೆಣ್ಣು ಮಗುವಿಗೆ ತನ್ನ ಮನೆಯೊಳಗೆ ಅಥವಾ ಮನೆಯ ಹೊರಗೆ ಹಿಜಾಬ್‌ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಗುರುವಾರ ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿ ಪ್ರತ್ಯೇಕ ತೀರ್ಪು ನೀಡಿರುವ ಅವರು, ‘ವಿದ್ಯಾರ್ಥಿನಿ ಶಾಲೆಯ ಗೇಟ್‌ ಒಳಗೆ ಕೂಡ ತನ್ನ ಘನತೆ ಹಾಗೂ ಗೋಪ್ಯತೆ ಕಾಪಾಡಿಕೊಳ್ಳುವ ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾಳೆ. ತರಗತಿಯೊಳಗೆ ಈ ಹಕ್ಕುಗಳು ಅನ್ವಯವಾಗುವುದಿಲ್ಲ ಎಂಬ ವಾದ ಸರಿಯಲ್ಲ’ ಎಂದು ಹೇಳಿದ್ದಾರೆ.

‘ಎಲ್ಲ ಅರ್ಜಿದಾರರು (ವಿದ್ಯಾರ್ಥಿನಿಯರು) ಕೇಳುತ್ತಿರುವುದು ಹಿಜಾಬ್‌ ಧರಿಸುವ ಅನುಮತಿಯನ್ನಷ್ಟೇ. ಪ್ರಜಾಪ್ರಭುತ್ವದಲ್ಲಿ ಇದನ್ನು ಕೇಳುವುದು ಕೂಡಾ ತಪ್ಪೇ. ಇದು ಸಾರ್ವಜನಿಕ ಆದೇಶ, ನೈತಿಕ ಅಥವಾ ಆರೋಗ್ಯ ಅಥವಾ ಸಂವಿಧಾನದ ಭಾಗ ಮೂರರ ಯಾವುದೇ ನಿಯಮದ ವಿರುದ್ಧವಾಗಿದೆಯೇ ಈ ಎಲ್ಲ ಪ್ರಶ್ನೆಗಳಿಗೆ ಹೈಕೋರ್ಟ್ ತೀರ್ಪಿನಲ್ಲಿ ಸಮರ್ಪಕ ಉತ್ತರ ನೀಡಲಾಗಿಲ್ಲ’ ಎಂದಿದ್ದಾರೆ.

‘ಕರ್ನಾಟಕದ ಯಾವುದೇ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಯಾವುದೇ ನಿರ್ಬಂಧ ಹೇರುವಂತಿಲ್ಲ’ ಎಂದಿರುವ ನ್ಯಾಯಮೂರ್ತಿ, ‘ನಮ್ಮ ಸಂವಿಧಾನದಲ್ಲಿ ಹಿಜಾಬ್‌ ಧರಿಸುವುದು ಒಂದು ಆಯ್ಕೆ. ಇದು ಅಗತ್ಯ ಧಾರ್ಮಿಕ ಪದ್ಧತಿಯಾಗಿಲ್ಲದೆ ಇರಬಹುದು. ಆದರೂ ಅದು ಪ್ರಜ್ಞೆ, ನಂಬಿಕೆ ಮತ್ತು ಅಭಿವ್ಯಕ್ತಿಯ ವಿಷಯವಾಗಿದೆ‘ ಎಂದಿದ್ದಾರೆ.

‘ಒಂದೊಮ್ಮೆ ಆಕೆ (ಮುಸ್ಲಿಂ ವಿದ್ಯಾರ್ಥಿನಿ) ತರಗತಿ ಒಳಗೆ ಕೂಡ ಹಿಜಾಬ್‌ ಧರಿಸಲು ಬಯಸಿದಲ್ಲಿ, ಆಕೆಯನ್ನು ತಡೆಯಲಾಗದು. ಇದು ಆಕೆಯ ಆಯ್ಕೆಯಾಗಿರಬಹುದು ಇಲ್ಲವೇ, ಇದು ಆಕೆಯ ಸಾಂಪ್ರದಾಯಿಕ ಕುಟುಂಬ ಆಕೆಯನ್ನು ಶಾಲೆಗೆ ಕಳುಹಿಸಲು ಅನುಮತಿ ನೀಡಿರುವ ಷರತ್ತಾಗಿರಬಹುದು. ಈ ಪ್ರಕರಣಗಳಲ್ಲಿ ಹಿಜಾಬ್‌ ಆಕೆಯ ಶಿಕ್ಷಣದ ಮಾರ್ಗವಾಗಿರುತ್ತದೆ’ ಎಂದಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ನಮ್ಮ ಸಮೃದ್ಧ ಸಂಸ್ಕೃತಿಯ ವೈವಿಧ್ಯತೆಯ ಮಹತ್ವ ಉಲ್ಲೇಖಿಸುವುದು ಅಗತ್ಯ ಎಂದು ಅವರು ಹೇಳಿದರು. ‘ಗ್ರಾಮಗಳಲ್ಲಿ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೊರಡುವ ಮುನ್ನಮನೆ ಕೆಲಸಗಳಲ್ಲಿ ತಾಯಿಗೆ ನೆರವಾಗಬೇಕು. ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳು ಎದುರಿಸುವ ಕಷ್ಟಗಳು ಗಂಡು ಮಕ್ಕಳಿಗಿಂತ ಹೆಚ್ಚು ಇರುತ್ತದೆ ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಧಾರ್ಮಿಕ ಸಂಕೇತ ಸರಿಯಲ್ಲ: ಹೇಮಂತ್‌ ಗುಪ್ತ

‘ಯಾವುದೇ ಒಬ್ಬ ವಿದ್ಯಾರ್ಥಿನಿ ತಲೆಗೆ ಸ್ಕಾರ್ಫ್‌ ಧರಿಸುವುದನ್ನು ಅಥವಾ ಯಾವುದೇ ಇತರ ವಿದ್ಯಾರ್ಥಿ ಧಾರ್ಮಿಕ ಸಂಕೇತದ ಬಟ್ಟೆಗಳನ್ನು ಧರಿಸುವು
ದರಿಂದ ರಾಜಿಯಾಗಲು ಒಪ್ಪದಿದ್ದಲ್ಲಿ ಸಂವಿಧಾನದ 14ನೇ ಪರಿಚ್ಛೇದದ ಅನುಸಾರ ಎಲ್ಲ ವಿದ್ಯಾರ್ಥಿಗೆ ಸಮಾನ ಹಕ್ಕು ಒದಗಿಸುವ ಉದ್ದೇಶದಿಂದ ಆ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸುವುದು ಸರಿ’ ಎಂದು ನ್ಯಾಯಮೂರ್ತಿ ಹೇಮಂತ್‌ ಗುಪ್ತ ಹೇಳಿದರು.

ಮೇಲ್ಮನವಿ ವಜಾ ಮಾಡಿ ಪ್ರತ್ಯೇಕ ಆದೇಶ ಹೊರಡಿಸಿರುವ ಅವರು, ‘ವಿದ್ಯಾರ್ಥಿಗಳ ಮುಂದೆ ತಮ್ಮ ಧಾರ್ಮಿಕ ನಂಬಿಕೆಯನ್ನು ಸೃಜಿಸಲು ಹಲವು ವರ್ಷಗಳಿವೆ. ವಿದ್ಯಾರ್ಥಿ ಜೀವನದ ನಂತರ ಈ ಕೆಲಸ ಮಾಡಬಹುದು. ಆದರೆ, ಸರ್ಕಾರಿ ಆದೇಶ ಸಂವಿಧಾನದ ಧ್ಯೇಯಗಳಿಗೆ ಅನುಗುಣವಾಗಿರುವುದರಿಂದ ಅದರಲ್ಲಿ ತಪ್ಪು ಕಂಡು ಹಿಡಿಯಲು ಆಗದು’ ಎಂದಿದ್ದಾರೆ.

‘ಒಬ್ಬ ವಿದ್ಯಾರ್ಥಿ ನಿರ್ದಿಷ್ಟ ವಸ್ತ್ರ ಧಾರಣೆಯಿಂದ ಒಂದು ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸಿದ್ದಲ್ಲಿ ಇತರ ವಿದ್ಯಾರ್ಥಿಗಳು ಕೂಡ ತಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಸೂಚಿಸಲು ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಇದು ಶಿಕ್ಷಣಕ್ಕಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ವಿದ್ಯಾರ್ಥಿಗಳು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಯೋಚಿಸದೆ, ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸಲು, ಶಿಸ್ತು ಮೂಡಿಸಲು, ಶಾಲೆಗಳಲ್ಲಿ ಕಲಹಗಳನ್ನು ತಪ್ಪಿಸಲು, ಮಕ್ಕಳಲ್ಲಿ ಏಕತೆಯ ಭಾವ ಮೂಡಿಸಲು, ಪೋಷಕರ ಮೇಲೆ ಆರ್ಥಿಕ ಒತ್ತಡ ಕಡಿಮೆಗೊಳಿಸಲು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಸಮಾನತೆ ಕಾಪಾಡಲು ವಸ್ತ್ರಸಂಹಿತೆ ನೆರವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಎಲ್ಲ ವಿದ್ಯಾರ್ಥಿಗಳು 14 ವರ್ಷ ಮೇಲ್ಪಟ್ಟವರಾದ ಕಾರಣ ಅವರಿಗೆ ಪರಿಚ್ಛೇದ 21ರ ಶಿಕ್ಷಣದ ಹಕ್ಕು ಅನ್ವಯವಾಗುವುದಿಲ್ಲ. ಈ ಪರಿಚ್ಛೇದದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕು ಒದಗಿಸಲಾಗಿದೆ. ಆದರೆ, ತಮ್ಮ ಧರ್ಮದ ಭಾಗವಾಗಿ ಜಾತ್ಯತೀತ ಶಾಲೆಗಳಲ್ಲಿ ವಸ್ತ್ರಸಂಹಿತೆಗೆ ಹೆಚ್ಚುವರಿಯಾಗಿ ಏನನ್ನಾದರೂ ಧರಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

‘ವಿದ್ಯಾರ್ಥಿಗಳು ಸಹೋದರತೆ, ಭ್ರಾತೃತ್ವದ ವಾತಾವರಣದಲ್ಲಿ ಬೆಳೆಯಬೇಕು. ಬಂಡಾಯ ಅಥವಾ ಪ್ರತಿಭಟನೆಯ ವಾತಾವರಣದಲ್ಲಿ ಅಲ್ಲ’ ಎಂದ ಅವರು, ಈ ಆದೇಶದ ಮೂಲಕ ಕರ್ನಾಟಕ ಸರ್ಕಾರ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನಿರ್ಬಂಧಿಸುತ್ತಿದೆ ಎಂದು ಹೇಳಲಾಗದು’ ಎಂದು ಪ್ರತಿಪಾದಿಸಿದ್ದಾರೆ.

‘ರಾಜ್ಯ ಸರ್ಕಾರವು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ಆದೇಶ ಹೊರಡಿಸುವ ಅಧಿಕಾರ ಹೊಂದಿದೆ. ಆದ್ದರಿಂದ, ಹಿಜಾಬ್ ಧರಿಸದಂತೆ ನಿರ್ಬಂಧಿಸುವ ಸರ್ಕಾರಿ ಆದೇಶ ಸರಿ ಇದೆ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT