ಶನಿವಾರ, ಡಿಸೆಂಬರ್ 3, 2022
21 °C
ಎರಡೂ ಪಕ್ಷಗಳ ಲೆಕ್ಕಾಚಾರ ಏರುಪೇರು ಸಾಧ್ಯತೆ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ:‘ಕೈ’, ‘ಕಮಲ’ಕ್ಕೆ ಭಿನ್ನಮತೀಯರ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವು ದಿನ ಉಳಿದಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಭಿನ್ನಮತದ ಬಿಸಿ ಎದುರಿಸುತ್ತಿವೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಎದ್ದಿರುವ ಮುಖಂಡರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದೆ. 

ಕಾಂಗ್ರೆಸ್‌ಗೆ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ, ಬಿಜೆಪಿಗೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತೀಯರು ಅಡ್ಡಿಯಾಗಿದ್ದಾರೆ. ನಾಮಪತ್ರ ವಾಪಸ್ ಪಡೆಯದೇ ಅವರು ಕಣದಲ್ಲಿ ಉಳಿದುಕೊಂಡಿರುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿದೆ. ಬಿಜೆಪಿಯ 5 ಮುಖಂಡರನ್ನು ಪಕ್ಷದಿಂದ ಕಿತ್ತುಹಾಕಲಾಗಿದೆ. ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಮಾಜಿ ಸ್ಪೀಕರ್ ಹಾಗೂ ಮಾಜಿ ಸಚಿವ ಸೇರಿದಂತೆ ಪಕ್ಷದ 6 ಮುಖಂಡರನ್ನು ಕಾಂಗ್ರೆಸ್ ಉಚ್ಛಾಟಿಸಿದೆ. ಭಿನ್ನಮತೀಯ ಅಭ್ಯರ್ಥಿಗಳು ಪಕ್ಷಗಳ ನಿರೀಕ್ಷೆಯನ್ನು ಬುಡಮೇಲು ಮಾಡುವ ಸಾಧ್ಯತೆಯಿದೆ. 

ಬಂಡಾಯದ ಕಹಳೆ

ಪಚ್ಚಡ್, ಅನ್ನಿ, ಸುಲಹ್, ಚೌಪಾಲ್, ಹಮೀರ್‌ಪುರ್, ಅಕ್ರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಪಕ್ಷದವರೇ ಎದುರಾಳಿಯಾಗಿದ್ದಾರೆ. ಮಂಡಿ, ಬಿಲಾಸ್‌ಪುರ, ಧರ್ಮಶಾಲಾ, ಚಂಬಾ, ದೆಹ್ರಾ, ಹಮೀರ್‌ಪುರ, ಫತೇಪುರ, ಅನ್ನಿ, ಸುಂದರನಗರಗಳಲ್ಲಿ ಬಿಜೆಪಿ ಸಹ ಇದೇ ಪರಿಸ್ಥಿತಿ ಎದುರಿಸುತ್ತಿದೆ.

ಮಾಜಿ ಸ್ಪೀಕರ್ ಗಂಗೂರಾಮ್ ಮುಸಾಫಿರ್ ಅವರು ಪಚ್ಚಡ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಯಾಳ್ ಪ್ಯಾರಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು 2017ರಲ್ಲಿ ಸೋತಿದ್ದರು. ಕಳೆದ ಬಾರಿ ಸೋತಿದ್ದ ಜಗಜೀವನ್‌ಪಾಲ್‌ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದಕ್ಕೆ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.

ಬಿಜೆಪಿಯ 11 ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಕುಲ್ಲು ರಾಜಮನೆತನದ ಹಿತೇಶ್ವರ್ ಸಿಂಗ್ ಅವರು ಬಂಜಾರ್ ಕ್ಷೇತ್ರದಲ್ಲಿ ಬಂಡಾಯ ಸಾರಿದ್ದಾರೆ. ಕಳೆದ ಬಾರಿ ದೆಹ್ರಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಹೋಷ್ಯಾರ್ ಸಿಂಗ್ ಅವರು ಬಳಿಕ ಬಿಜೆಪಿ ಸೇರಿದ್ದರು. ಆದರೆ ಈ ಬಾರಿ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

- ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹಿಮಾಚಲ ಪ್ರದೇಶದ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಲಿದ್ದಾರೆ; ಕಾಂಗ್ರೆಸ್ ಪ್ರಣಾಳಿಕೆ ಶನಿವಾರ ಬಿಡುಗಡೆಯಾಗುವ ಸಾಧ್ಯತೆಯಿದೆ

- ಪ್ರಧಾನಿ ನರೇಂದ್ರ ಮೋದಿ ಅವರು ಇದೇ 5 ಹಾಗೂ 9ರಂದು ಹಿಮಾಚಲ ಪ್ರದೇಶದ ಎರಡು ಕಡೆ ಬಹಿರಂಗ ರ್‍ಯಾಲಿ ನಡೆಸಲಿದ್ದಾರೆ 

- ಮಲ್ಲಿಕಾರ್ಜುನ ಖರ್ಗೆ ಅವರು ಇದೇ 8 ಹಾಗೂ 9ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರು ನಡೆಸುತ್ತಿರುವ ಮೊದಲ ಚುನಾವಣಾ ಪ್ರಚಾರವಿದು

- ಗುಜರಾತ್ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್, ರಾಜ್ಯದಲ್ಲಿ ‘ಪರಿವರ್ತನ ಸಂಕಲ್ಪ ಯಾತ್ರೆ’ ಶುರು ಮಾಡಿದೆ. ಒಟ್ಟು 5,400 ಕಿಲೋಮೀಟರ್ ಕ್ರಮಿಸಲಿ
ರುವ ಈ ಯಾತ್ರೆಯ ಭಾಗವಾಗಿ, 145 ಬೃಹತ್ ರ್‍ಯಾಲಿ ಹಾಗೂ 95 ಸಮಾವೇಶಗಳು ನಡೆಯಲಿವೆ

- ಗುಜರಾತ್: ಬಿಜೆಪಿ ಮಾಜಿ ಸಂಸದ ಪ್ರಭಾತ್‌ಸಿಂಹ ಚೌಹಾಣ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಇವರಿಗೆ ಪಂಚಮಹಲ್ ಕ್ಷೇತ್ರದ ಟಿಕೆಟ್ ನೀಡಲು ನಿರಾಕರಿಸಿತ್ತು

    ಮೊದಲ ಪರಮವೀರ ಚಕ್ರ ಗೌರವ ಸಿಕ್ಕಿದ್ದು ಹಿಮಾಚಲದ ಸೋಮನಾಥ ಶರ್ಮಾ ಅವರಿಗೆ. ಆದರೆ, ರಾಜ್ಯದ ಜನರು 40 ವರ್ಷಗಳಿಂದ ‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆ ಜಾರಿಗೆ ಆಗ್ರಹಿಸುತ್ತಿದ್ದರು. ಕಾಂಗ್ರೆಸ್ ಕಿವುಡಾಗಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಜಾರಿಗೊಳಿಸಿದರು

-ಅಮಿತ್ ಶಾ, ಕೇಂದ್ರ ಗೃಹಸಚಿವ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು