ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಎನ್‌ಡಿಆರ್‌ಎಫ್‌ನಿಂದ ಪರಿಣತರ ತಂಡಗಳ ನಿಯೋಜನೆ

ಪರ್ವತ ಶ್ರೇಣಿಗಳ ಅತಿ ಎತ್ತರದ ಪ್ರದೇಶಗಳಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ
Last Updated 22 ಜನವರಿ 2023, 11:42 IST
ಅಕ್ಷರ ಗಾತ್ರ

ನವದೆಹಲಿ: ಹಿಮ ಕುಸಿತ, ಭೂಕುಸಿತ ಮತ್ತು ಹಿಮನದಿಗಳಿಂದ ಉಂಟಾಗುವ ದಿಢೀರ್‌ ಪ್ರವಾಹ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಲು ಅನುವಾಗುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಹಿಮಾಲಯದ ಅತಿ ಎತ್ತರದ ಪ್ರದೇಶಗಳಲ್ಲಿ ನುರಿತ ಪರ್ವತಾರೋಹಿಗಳ ತಂಡವನ್ನು ನಿಯೋಜಿಸಲು ನಿರ್ಧರಿಸಿದೆ.

‘ಅತಿ ಎತ್ತರದ ಪ್ರದೇಶಗಳಲ್ಲಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) ಪೋಸ್ಟ್‌ಗಳಲ್ಲಿ ಎನ್‌ಡಿಆರ್‌ಎಫ್‌ನ ನುರಿತ ಪರ್ವತಾರೋಹಿಗಳ ತಂಡವನ್ನು ನಿಯೋಜಿಸಲು ಚಿಂತಿಸಲಾಗಿದ್ದು, ಈ ಸಂಬಂಧ ಯೋಜನೆ ಸಿದ್ಧಪಡಿಸಲಾಗಿದೆ. ಪ್ರತಿ ತಂಡದಲ್ಲೂ ನಾಲ್ಕರಿಂದ ಐದು ಮಂದಿ ಇರಲಿದ್ದಾರೆ. ಈ ತಂಡಗಳನ್ನು ಮೂರು ಇಲ್ಲವೇ ನಾಲ್ಕು ತಿಂಗಳ ಅವಧಿಗೆ ಸರತಿಯ ಪ್ರಕಾರ ನಿಯೋಜಿಸಲಾಗುತ್ತದೆ. ಪರ್ವತ ಶ್ರೇಣಿಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದರೆ ತುರ್ತಾಗಿ ಕಾರ್ಯಾಚರಣೆ ಕೈಗೊಳ್ಳಲು ಇದರಿಂದ ನೆರವಾಗಲಿದೆ’ ಎಂದು ಎನ್‌ಡಿಆರ್‌ಎಫ್‌ ಮಹಾ ನಿರ್ದೇಶಕ ಅತುಲ್‌ ಕರ್ವಾಲ್‌ ಹೇಳಿದ್ದಾರೆ.

‘ಪರ್ವತ ಶ್ರೇಣಿಗಳಲ್ಲಿನ ಆಗು ಹೋಗುಗಳ ಬಗ್ಗೆ ನಮ್ಮ ಸಿಬ್ಬಂದಿಗೆ ಅರಿವಿರಬೇಕು. ಅವರು ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳದಿದ್ದರೆ ಆ ಪ್ರದೇಶಗಳಲ್ಲಿ ಉಂಟಾಗಬಹುದಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಕಷ್ಟವಾಗುತ್ತದೆ. ಆಗ ನಾವು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ.

‘ಪರ್ವತಾರೋಹಣ ಸಂಸ್ಥೆಗಳಲ್ಲಿ ತರಬೇತಿ ಹೊಂದಿರುವ 125 ಮಂದಿಯನ್ನು ಇತ್ತೀಚೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಮ್ಮ 16 ಬೆಟಾಲಿಯನ್‌ಗಳಲ್ಲೂ ಪರಿಣತರ ತಂಡ ಇರಬೇಕು ಎಂಬುದನ್ನು ಬಯಸುತ್ತೇವೆ. ಪರ್ವತಾಶ್ರೇಣಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವುಕ್ಕಾಗಿಯೇ ವಿಶೇಷವಾಗಿ ನಾಲ್ಕು ತಂಡಗಳನ್ನು ಮೀಸಲಿಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೋಶಿಮಠ; ಬಿರುಕು ಮೂಡಿದ ಕಟ್ಟಡಗಳ ಸಂಖ್ಯೆ 863ಕ್ಕೆ ಏರಿಕೆ (ಡೆಹ್ರಾಡೂನ್‌ ವರದಿ): ‘ಜೋಶಿಮಠದಲ್ಲಿ ಬಿರುಕು ಮೂಡಿರುವ ಕಟ್ಟಡಗಳ ಸಂಖ್ಯೆಯು 863ಕ್ಕೆ ಏರಿದೆ. ಅಸುರಕ್ಷಿತ ಕಟ್ಟಡಗಳ ನೆಲಸಮ ಕಾರ್ಯವನ್ನು ಶನಿವಾರದಿಂದ ಪುನರಾರಂಭಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT