ಸೋಮವಾರ, ಜೂನ್ 14, 2021
21 °C
14 ಸಚಿವರಿಂದಲೂ ಪ್ರಮಾಣ ವಚನ ಸ್ವೀಕಾರ

ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕಾರ

ಪಿಟಿಐ‌ Updated:

ಅಕ್ಷರ ಗಾತ್ರ : | |

ಗುವಾಹಟಿ: ಬಿಜೆಪಿಯ ಹಿರಿಯ ಮುಖಂಡ ಹಿಮಂತ ಬಿಸ್ವ ಶರ್ಮಾ ಅವರು ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯಾಹ 12 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಜಗದೀಶ್‌ ಮುಖಿ ಅವರು ಶರ್ಮಾ ಮತ್ತು ಇತರ 13 ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಶಂಕರದೇವ್‌ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಿತು. 

ಸಚಿವ ಸ್ಥಾನ ಪಡೆದುಕೊಂಡ 13 ಶಾಸಕರ ಪೈಕಿ ಬಿಜೆಪಿಯ ಮಿತ್ರಪಕ್ಷಗಳಾದ ಅಸ್ಸಾಂ ಗಣ ಪರಿಷತ್‌ನ (ಎಜಿಪಿ) ಇಬ್ಬರು ಮತ್ತು ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ನ ಒಬ್ಬರು ಸೇರಿದ್ದಾರೆ. ಸರ್ವಾನಂದ ಸೋನೊವಾಲ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಮಂದಿಗೆ ಹೊಸ ಸಚಿವ ಸಂಪುಟದಲ್ಲಿಯೂ ಅವಕಾಶ ಸಿಕ್ಕಿದೆ. 

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ಮಾಜಿ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌, ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ, ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌, ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ನ ಮುಖ್ಯಸ್ಥ ಹಗ್ರಾಮ ಮೊಹಿಲಾರಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

2014ರ ಲೋಕಸಭಾ ಚುನಾವಣೆಯಿಂದಲೇ ಬಿಜೆಪಿ ಅಸ್ಸಾಂನಲ್ಲಿ ನಡೆಸಿದ ಅಸ್ಮಿತೆ ಕೇಂದ್ರಿತ ರಾಜಕಾರಣದ ಮುಖವಾಗಿ ಸೋನೊವಾಲ್‌ ಇದ್ದರು. ಆದರೆ, 2015ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶರ್ಮಾ ಅವರು ಈಶಾನ್ಯ ಭಾಗದಲ್ಲಿ ಬಿಜೆಪಿ ನೆಲೆ ಗಟ್ಟಿಗೊಳಿಸಲು ನೆರವಾಗಿದ್ದಾರೆ. ಹಾಗಾಗಿ, ಈ ಇಬ್ಬರ ನಡುವೆ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಇತ್ತು. 

ಈ ಬಾರಿ ಚುನಾವಣೆಗೆ ಮುಂಚೆಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿರಲಿಲ್ಲ. ಶರ್ಮಾ ಅವರನ್ನು ಈ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ ಎಂಬ ಸುಳಿವನ್ನು ಇದು ನೀಡಿತ್ತು. 

ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸುವುದೇ ಸರ್ಕಾರದ ಆದ್ಯತೆ ಎಂದು ಪ್ರಮಾಣವಚನದ ಬಳಿಕ ಮಾತನಾಡಿದ ಶರ್ಮಾ ತಿಳಿಸಿದ್ದಾರೆ. ಸಣ್ಣ ಸಾಲ ಮನ್ನಾ ಮುಂತಾದ ಪ್ರಣಾಳಿಕೆಯ ಭರವಸೆಗಳನ್ನೂ ಈಡೇರಿಸಲಾಗುವುದು ಎಂದಿದ್ದಾರೆ. ಉಲ್ಫಾ ನಾಯಕ ಪರೇಶ್‌ ಬರುವಾಗೆ ಮಾತುಕತೆಗೆ ಬರುವಂತೆ ಕರೆ ಕೊಟ್ಟಿದ್ದಾರೆ.


ಪ್ರಮಾಣವಚನ ಸಮಾರಂಭಕ್ಕೆ ಮುನ್ನ ಹಿಮಂತ ಬಿಸ್ವ ಶರ್ಮಾ ಮತ್ತು ಹೆಂಡತಿ ರಿಂಕಿ ಶರ್ಮಾ -ಪಿಟಿಐ ಚಿತ್ರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು