ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ: ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ

Last Updated 15 ನವೆಂಬರ್ 2021, 5:24 IST
ಅಕ್ಷರ ಗಾತ್ರ

ಪುಣೆ: ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ (ಬಲ್ವಂತ್‌ ಮೊರೇಶ್ವರ್‌ ಪುರಂದರೆ) ಅವರು ಇಂದು ಮುಂಜಾನೆ ನಿಧನರಾದರು.

ವಾರದ ಹಿಂದೆ ನ್ಯುಮೋನಿಯಾಗೆ ಒಳಗಾಗಿದ್ದ ಬಾಬಾಸಾಹೇಬ್‌ ಪುರಂದರೆ (99) ಅವರು ಪುಣೆಯ ದೀನಾನಾಥ್ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ವೆಂಟಿಲೇಟರ್‌ ನೆರವಿನಿಂದ ಉಸಿರಾಡುತ್ತಿದ್ದರು. ಭಾನುವಾರ ಅವರ ಆರೋಗ್ಯ ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು ಎಂದು ವೈದ್ಯರು ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಕುರಿತು ನಿಖರವಾಗಿ ಹೇಳಬಹುದಾದ ವ್ಯಕ್ತಿ, 'ಶಿವ್‌ ಶಾಹಿರ್‌' ಎಂದೇ ಪುರಂದರೆ ಖ್ಯಾತರಾಗಿದ್ದರು. ಮರಾಠಿಯಲ್ಲಿ ಶಿವಾಜಿ ಮಹಾರಾಜ್‌ ಕುರಿತು ಪುರಂದರೆ ಅವರು ಎರಡು ಭಾಗಗಳಲ್ಲಿ ರಚಿಸಿರುವ 900 ಪುಟಗಳ ಕೃತಿ 'ರಾಜಾ ಶಿವಛತ್ರಪತಿ' ಜನಪ್ರಿಯತೆ ಪಡೆದಿದೆ. ಮೊದಲ ಬಾರಿಗೆ 1950ರಲ್ಲಿ ಪ್ರಕಟಗೊಂಡ ಕೃತಿಯು ಈವರೆಗೂ ಹಲವು ಬಾರಿ ಮರುಮುದ್ರಣ ಕಂಡಿದೆ ಹಾಗೂ ಮರಾಠಿಗರ ಪ್ರತಿ ಮನೆಯಲ್ಲಿ ಸ್ಥಾನ ಪಡೆದಿದೆ.

1980ರ ದಶಕದಲ್ಲಿ ಶಿವಾಜಿ ಮಹಾರಾಜ್‌ ಅವರ ಜೀವನವನ್ನು ಆಧರಿಸಿ 'ಜಾಣತಾ ರಾಜ' ನಾಟಕವನ್ನು ರಚಿಸಿ, ನಿರ್ದೇಶಿಸಿದರು.

ಇತ್ತೀಚಿಗೆ 99ನೇ ವಸಂತ ಪೂರೈಸಿದ ಪುರಂದರೆ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಸಂದೇಶ ರವಾನಿಸಿದ್ದರು. 'ಬಾಬಾಸಾಹೇಬ್‌ ಅವರ ಕೆಲಸಗಳು ಸ್ಫೂರ್ತಿ ನೀಡುವಂತವು. ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಜೀವನಾಧಾರಿತ ಜಾಣತಾ ರಾಜ ನಾಟಕವನ್ನು ವೀಕ್ಷಿಸಲು ಪುಣೆಗೆ ಭೇಟಿ ನೀಡಿದ್ದೆ. ಬಾಬಾಸಾಹೇಬ್‌ ಅಹಮದಾಬಾದ್‌ಗೆ ಬಂದಾಗಲೂ ಅವರ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗುತ್ತಿದ್ದೆ' ಎಂದು ಮೋದಿ ಹೇಳಿದ್ದರು.

ಪ್ರಧಾನಿ ಮೋದಿ ಚಿತ್ರ ಸಹಿತ ಟ್ವೀಟ್‌ ಮಾಡುವ ಮೂಲಕ ಬಾಬಾಸಾಹೇಬ್‌ ಪುರಂದರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಆಗಿರುವ ನೋವು ಪದಗಳಲ್ಲಿ ಹೇಳಲಾಗದು. ಶಿವಶಾಹಿರ್‌ ಬಾಬಾಸಾಹೇಬ್‌ ಪುರಂದರೆ ಅವರ ಅಗಲಿಕೆಯು ಇತಿಹಾಸ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ...' ಎಂದು ಟ್ವೀಟಿಸಿದ್ದಾರೆ.

ಬಾಬಾಸಾಹೇಬ್‌ ಪುರಂದರೆ ಅವರು ಹುಟ್ಟಿದ್ದು 1922ರ ಜುಲೈ 29ರಂದು. ಅವರಿಗೆ 2019ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT