ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಪಾಲಕ್ಕಾಡ್‌ನಲ್ಲಿ ಮರ್ಯಾದೆಗೇಡು ಹತ್ಯೆ ಶಂಕೆ

Last Updated 26 ಡಿಸೆಂಬರ್ 2020, 10:58 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಶುಕ್ರವಾರ ಯುವಕನೊಬ್ಬನ ಹತ್ಯೆ ನಡೆದಿದ್ದು, ಇದು ಮರ್ಯಾದೆಗೇಡು ಹತ್ಯೆ ಎನ್ನುವ ಸಂಶಯ ವ್ಯಕ್ತವಾಗಿದೆ.

ಯುವಕನ ಪತ್ನಿಯ ಕುಟುಂಬ ಸದಸ್ಯರೇ ಈ ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ. ಪಾಲಕ್ಕಾಡ್‌ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ತೆಂಕುರ್ಶಿ ಬಳಿಯ ಇಳಮಂದಂನ ಆರ್ಮುಗಂ ಅವರ ಮಗ ಅನೀಶ್‌(27) ಮೃತ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯ ತಂದೆ ಪ್ರಭುಕುಮಾರ್‌ ಹಾಗೂ ಮಾವ ಸುರೇಶ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಅನೀಶ್‌ ಹಾಗೂ ಹರಿತಾ ಶಾಲಾ ದಿನಗಳಿಂದಲೂ ಪ್ರೇಮಿಸುತ್ತಿದ್ದರು. ಅನೀಶ್‌ ಕೆಳಜಾತಿಯವನು ಎಂಬ ಕಾರಣಕ್ಕೆ ಇದಕ್ಕೆ ಪಿಳ್ಳೈ ಸಮುದಾಯದ ಹರಿತಾ ಅವರ ಕುಟುಂಬದವರು ವಿರೋಧಿಸುತ್ತಿದ್ದರು. ಮೂರು ತಿಂಗಳ ಹಿಂದೆ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇವರ ಮದುವೆ ನಡೆದಿತ್ತು. ಯುವಕನ ಕುಟುಂಬವೂ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಹರಿತಾ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದರು. ‘ಹುಡುಗಿಯ ಕುಟುಂಬದವರು ಅನೀಶ್‌ನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದರು’ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದರು.

ಶುಕ್ರವಾರ, ಅನೀಶ್‌ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ, ಮನಂಕುಳಂಬು ಪ್ರದೇಶದಲ್ಲಿ ಇಬ್ಬರು ವಾಹನ ತಡೆದು ಆತನನ್ನು ಹತ್ಯೆಗೈದಿದ್ದಾರೆ. ಪ್ರಭುಕುಮಾರ್‌ ಹಾಗೂ ಸುರೇಶ್‌ ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ ಎನ್ನುವ ಆರೋಪವಿದೆ. ‘ಮೇಲ್ನೋಟಕ್ಕೆ ಇದೊಂದು ಮರ್ಯಾದೆಗೇಡು ಹತ್ಯೆ ಎಂದು ಕಂಡುಬಂದರೂ, ಯುವತಿಯ ಹೇಳಿಕೆ ದಾಖಲಿಸಿದ ಬಳಿಕವಷ್ಟೇ ಮುಂದಿನ ಸ್ಪಷ್ಟನೆ ನೀಡಲು ಸಾಧ್ಯ. ಪ್ರಸ್ತುತ ಆಕೆ ಆಘಾತದಲ್ಲಿದ್ದು, ಹೇಳಿಕೆ ಪಡೆಯಲು ಸಮಯ ಹಿಡಿಯಲಿದೆ. ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ’ ಎಂದು ಪಾಲಕ್ಕಾಡ್‌ ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಸುಜಿತ್‌ದಾಸ್‌ ಎಸ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆಯೂ ಅನೀಶ್‌ಗೆ ಬೆದರಿಕೆ ಹಾಕಿದ ದೂರುಗಳು ಬಂದಿತ್ತು. ಆರೋಪಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಕೇರಳ ಯುವ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಂದ ವರದಿ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT