ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದೆಗೇಡು ಹತ್ಯೆ: ತಂದೆ ಸೇರಿ ಐವರ ಬಂಧನ

ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶುಭಾಂಗಿ ಜೋಗದಂದ್ ಅವರನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸಂಬಂಧಿಕರು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಇದೇ 22ರಂದು ನಡೆದ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ. ಶುಭಾಂಗಿಯನ್ನು ಆಕೆಯ ಕುಟುಂಬ ಸದಸ್ಯರು ಹಗ್ಗದಿಂದ ಬಿಗಿದು ಕೊಂದಿದ್ದಾರೆ. ನಂತರ ಆಕೆಗೆ ಬೆಂಕಿ ಹಚ್ಚಿ, ಸಾಕ್ಷಿ ನಾಶಪಡಿಸಲು ಆಕೆಯ ಅವಶೇಷಗಳನ್ನು ಹೊಳೆಯಲ್ಲಿ ಎಸೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಎಚ್‌ಎಂಎಸ್) ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಆಕೆ ತನ್ನ ಗ್ರಾಮದ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ತನ್ನ ಕುಟುಂಬದವರು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಳು. ಇದರಿಂದ ನಿಶ್ಚಯಗೊಂಡಿದ್ದ ಮದುವೆ ಮುರಿದುಬಿದ್ದಿತ್ತು. ಹೀಗಾಗಿ ಕುಟುಂಬದವರು ಅಸಮಾಧಾನಗೊಂಡು, ಜ.22ರ ರಾತ್ರಿ ಶುಂಭಾಗಿಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳು ಆಕೆಯನ್ನು ಜಮೀನಿಗೆ ಕರೆದೊಯ್ದು, ಹತ್ಯೆ ಮಾಡಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.