ಸೋಮವಾರ, ಸೆಪ್ಟೆಂಬರ್ 20, 2021
21 °C
ಹೌಸಿಂಗ್‌ ಎಂಡ್‌ ಲ್ಯಾಂಡ್‌ ರೈಟ್ಸ್‌ ನೆಟ್‌ವರ್ಕ್‌ ವರದಿ

ಕೋವಿಡ್ ಕಾಲದಲ್ಲಿ ಮನೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ 19 ಸಾಂಕ್ರಾ ಮಿಕ ತೀವ್ರವಾಗಿದ್ದ 2020ರ ಮಾರ್ಚ್ ಹಾಗೂ 2021ರ ಜುಲೈ ನಡುವೆ ದೇಶಾ ದ್ಯಂತ 43,600 ಮನೆ ಅಥವಾ ಗುಡಿಸಲುಗಳನ್ನು ತೆರವು ಮಾಡಲಾಗಿದೆ. 2.57 ಲಕ್ಷ ಜನರನ್ನು ಇದರಿಂದಾಗಿ ಆಶ್ರಯ ಕಳೆದುಕೊಂಡಿದ್ದಾರೆ.

ಹೌಸಿಂಗ್‌ ಎಂಡ್‌ ಲ್ಯಾಂಡ್‌ ರೈಟ್ಸ್‌ ನೆಟ್‌ವರ್ಕ್‌ (ಎಚ್‌ಎಲ್‌ಆರ್‌ಎನ್‌) ಎಂಬ ಎನ್‌ಜಿಒ ಸಿದ್ಧಪಡಿಸಿದ ‘2020ರಲ್ಲಿ ಬಲವಂತದ ಹೊರಹಾಕುವಿಕೆ: ಸಾಂಕ್ರಾಮಿಕ ಸಮಯದಲ್ಲಿ ತೀವ್ರವಾದ ಮಾನವ ಹಕ್ಕುಗಳ ಬಿಕ್ಕಟ್ಟು’ ಎಂಬ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. 

ವರದಿಯ ಪ್ರಕಾರ, ಸರ್ಕಾರಿ ಅಧಿಕಾರಿಗಳು ದಿನಕ್ಕೆ ಕನಿಷ್ಠ 505 ಜನರನ್ನು ಅಥವಾ ಪ್ರತಿ ಗಂಟೆಗೆ 21 ಜನರನ್ನು ತೆರವು ಮಾಡಿದ್ದಾರೆ.  

‘ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ, 2017ರಿಂದ 2020ರವರೆಗೆ ವಿವಿಧ ರಾಜ್ಯಗಳು 7,41,300 ಜನರನ್ನು ತೆರವು ಮಾಡಿವೆ. ವರ್ಷವೊಂದಕ್ಕೆ ಸರಾಸರಿ 1,85,300 ಜನರನ್ನು ಒಕ್ಕಲೆಬ್ಬಿಸಲಾಗಿದೆ’ ಎಂದು ವರದಿ ಹೇಳಿದೆ.

‘2020 ಮತ್ತು 2021ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲೂ ತೆರವು ಕಾರ್ಯಾಚರಣೆ ಮುಂದುವರಿದಿತ್ತು. ಜನರಿಗೆ  ಮನೆಯಲ್ಲಿ ಇರುವಂತೆ ಆದೇಶಿಸಿದ್ದ ಸಮಯದಲ್ಲಿ ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಜನರು ಕೋರ್ಟ್‌ಗಳಿಗೆ ಹೋಗಲು ಅವಕಾಶವಿಲ್ಲದ, ಕರ್ಫ್ಯೂ ಹೇರಿದ್ದ ಪರಿಸ್ಥಿತಿಯ ಲಾಭ ಪಡೆದುಕೊಂಡು ಅಧಿಕಾರಿಗಳು ತಮ್ಮ ಕೆಲಸ ಮುಂದುವರಿಸಿದ್ದರು’ ಎಂದು ವರದಿ ಹೇಳಿದೆ.

ಎಚ್‌ಎಲ್‌ಆರ್‌ಎನ್‌ ನಡೆಸಿದ ವಿಶ್ಲೇಷಣೆ ಪ್ರಕಾರ, ಈ ವರ್ಷದ ಮೊದಲ ಏಳು ತಿಂಗಳಲ್ಲಿ ಅಧಿಕಾರಿಗಳು ಕನಿಷ್ಠ 24,445 ಮನೆಗಳನ್ನು ನೆಲಸಮಗೊಳಿಸಿದ್ದು, ಅದು 1,69,176 ಜನರ ಮೇಲೆ ಪರಿಣಾಮ ಬೀರಿದೆ. ಈ ಪೈಕಿ 13,750 ಜನರನ್ನು ಎರಡನೇ ಅಲೆ ಜೋರಾಗಿದ್ದ ಸಮಯದಲ್ಲಿ ಒಕ್ಕಲೆಬ್ಬಿಸಲಾಯಿತು.

‘ಕೋವಿಡ್ ಉತ್ತುಂಗದಲ್ಲಿದ್ದ ಸಮಯದಲ್ಲಿ ತೆರವು ಮಾಡಲಾದ ಈ ಎಲ್ಲ ಪ್ರಕರಣಗಳು ಕಡಿಮೆ ಆದಾಯದ ವರ್ಗದವರನ್ನು ನಿರಾಶ್ರಿತರನ್ನಾಗಿ ಮಾಡಿತು. ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಸಮಯದಲ್ಲಿ ನಡೆಸಿದ ತೆರವು ಕಾರ್ಯಾಚರಣೆಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಗೆ ಕಾರಣವಾಗಿವೆ. ಕಾರ್ಯಾಚರಣೆಯಿಂದ ಉಂಟಾದ ವ್ಯಾಪಕ ಹಾನಿಯಿಂದ ಸಂವಿಧಾನವು ಖಾತರಿಪಡಿಸಿರುವ ಜನರ ಜೀವಿಸುವ ಹಕ್ಕು ಮೊಟಕುಗೊಂಡಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಅಕ್ರಮ ವಲಸಿಗರು

ರೈಲ್ವೆ ಹಳಿಗಳ ವಿಸ್ತರಣೆಗಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮೈಸೂರಿನಲ್ಲಿ 200 ಮನೆಗಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ತೆರವು ಗೊಳಿಸಲಾಗಿದೆ. 

2020ನೇ ಇಸ್ವಿಯ ಜನವರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ದೇವರಬೀಸನಹಳ್ಳಿಯಲ್ಲಿ 500 ಮತ್ತು ಬೆಳ್ಳಂದೂರು ಮತ್ತು ಕರಿಯಮ್ಮನ ಅಗ್ರಹಾರದಲ್ಲಿ 200 ಗುಡಿಸಲುಗಳನ್ನು ತೆರವು ಮಾಡಿದೆ ಎಂದು ವರದಿ ಹೇಳಿದೆ. ‘ವಲಸೆ ಕಾರ್ಮಿಕರಾದ ಸಂತ್ರಸ್ತರನ್ನು ‘ಅಕ್ರಮ ಬಾಂಗ್ಲಾದೇಶಿಯರು’ ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ. ಅವರ ಜೋಪಡಿಗಳನ್ನು ನೆಲಸಮ ಮಾಡಲು ಸಮರ್ಥನೆಯಾಗಿ ಇದನ್ನು ಬಳಸಿಕೊಳ್ಳಲಾಯಿತು. ತೆರವು ಕಾರ್ಯಾಚರಣೆಯನ್ನು ಕರ್ನಾಟಕ ಹೈಕೋರ್ಟ್‌ ತಡೆಹಿಡಿದು, ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಬಿಬಿಎಂಪಿಗೆ ಸೂಚಿಸಿತ್ತು’ ಎಂದು ವರದಿ ಉಲ್ಲೇಖಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು