ಚಂಡೀಗಢ: ಖಾಲಿಸ್ತಾನ ಪರಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಸಿಂಗ್ ಅವರು ಪರಾರಿಯಾದ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಅಮೃತ್‌ಪಾಲ್ ಬಂಧನ ಸಂಬಂಧ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆಯೂ ಹೇಳಿದೆ.
‘ನಿಮ್ಮ ಬಳಿ 80 ಸಾವಿರ ಪೊಲೀಸರಿದ್ದಾರೆ. ಅವರೆಲ್ಲಾ ಏನು ಮಾಡುತ್ತಿದ್ದರು? ಅಮೃತ್‌ಪಾಲ್ ಪರಾರಿಯಾಗಲು ಹೇಗೆ ಸಾಧ್ಯವಾಯಿತು’ ಎಂದು ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ಕೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
‘ಅಮೃತ್‌ಪಾಲ್ ಅವರನ್ನು ಪೊಲೀಸರು ‘ಅಕ್ರಮವಾಗಿ ಹಾಗೂ ಒತ್ತಾಯಪೂರ್ವಕ’ವಾಗಿ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದ
ಅಮೃತ್‌ಪಾಲ್ ಅವರನ್ನು ಬಿಡುಗಡೆ ಮಾಡಬೇಕು. ಜೊತೆಗೆ ನ್ಯಾಯಾಲಯಕ್ಕೆ ಹಾಜರು ಮಾಡಬೇಕು’ ಎಂದು ಕೋರಿಅಮೃತ್‌ಪಾಲ್ ಪರ ವಕೀಲ ಇಮಾನ್‌ಸಿಂಗ್ ಖೇರಾ ಅವರು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ
ದ್ದಾರೆ. ಈ ಸಂಬಂಧ ಮಂಗಳವಾರ ವಿಚಾರಣೆ ನಡೆಯಿತು.
‘ಅಮೃತ್‌ಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ಬಳಸಲಾಗುವುದು’ ಎಂದು ಪಂಜಾಬ್ ಸರ್ಕಾರವು ಹೈಕೋರ್ಟ್‌ಗೆ ಮಂಗಳವಾರ ತಿಳಿಸಿತು (ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ತೋರುವ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಈ ಕಾಯ್ದೆಯು ಅವಕಾಶ ಕೊಡುತ್ತದೆ). ಆದರೆ, ಅಮೃತ್‌ಪಾಲ್ ಅವರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇದು ಗುಪ್ತಚರ ವೈಫಲ್ಯ’ ಎಂದು ಹೇಳಿದೆ.
‘ಅಮೃತ್‌ಪಾಲ್ ಬಂಧಿಸಲು ಇಡೀ ಪೊಲೀಸ್ ಇಲಾಖೆಯೇ ಸಶಸ್ತ್ರರಾಗಿ ತೊಡಗಿಕೊಂಡಿತ್ತು. ಜೊತೆಗೆ, ಅವರ ಬಂಧನಕ್ಕಾಗಿ ಯೋಜನೆಯನ್ನೂ ರೂಪಿಸಿತ್ತು. ಹಾಗಿದ್ದರೂ ಪೊಲೀಸರ ಯೋಜನೆಯನ್ನು ವಿಫಲಗೊಳಿಸಿ ಅಮೃತ್‌ಪಾಲ್ ಅವರು ಹೇಗೆ ಪರಾರಿ
ಯಾದರು’ ಎಂದು ನ್ಯಾಯಮೂರ್ತಿ ಎನ್.ಎಸ್. ಶೇಖಾವತ್ ಅವರು ಅಡ್ವೊಕೇಟ್ ಜನರಲ್ ವಿನೋದ್ ಗಾಯಿ ಅವರನ್ನು ಪ್ರಶ್ನಿಸಿದರು.
‘ರಾಜ್ಯ ಪೊಲೀಸರು ಅಮೃತ್‌ಪಾಲ್ ಅವರನ್ನು ಬಂಧಿಸಲು ಸಜ್ಜಾಗಿದ್ದರು. ಆದರೆ, ಕಾರ್ಯಾಚರಣೆಯು ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದರಿಂದ ಪೊಲೀಸರು ಸಂಯಮ ಪಾಲಿಸಬೇಕಾಯಿತು’ ಎಂದು ಗಾಯಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ‘ಕೆಲವು ವಿಚಾರಗಳು ಸೂಕ್ಷ್ಮವಾಗಿದ್ದು, ಅದನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.
ಅಮೃತ್‌ಪಾಲ್ ಅವರ ‘ವಾರಿಸ್ ಪಂಜಾಬ್ ದೇ’ ಸಂಘಟನೆಗೂ ಇಮಾನ್ ವಕೀಲರಾಗಿದ್ದಾರೆ. ವಿಚಾರಣೆ ವೇಳೆ ಅಮೃತ್‌ಪಾಲ್ ತಂದೆ ತರ್ಸೀಮ್ ಸಿಂಗ್ ನ್ಯಾಯಾಲಯದಲ್ಲಿ ಹಾಜರಿದ್ದರು.
ಅಮೃತ್‌ಪಾಲ್ ಪರಾರಿಯಾದದ್ದು ಹೇಗೆ?
ಅಮೃತ್‌ಪಾಲ್ ಅವರನ್ನು ಬಂಧಿಸಲು ಪಂಜಾಬ್ ಪೊಲೀಸರು ಇದೇ 18ರಂದು ಯೋಜನೆ ರೂಪಿಸಿದ್ದರು. ತಮ್ಮ ಯೋಜನೆ ಹಾಗೂ ಅಮೃತ್‌ಪಾಲ್ ಪರಾರಿಯಾದದ್ದು ಹೇಗೆ ಎಂಬುದರ ಕುರಿತು ಹೈಕೋರ್ಟ್‌ಗೆ ಪಂಜಾಬ್ ಪೊಲೀಸರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
‘ಅಮೃತಸರದ ಖಿಲ್ಚಿಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಾಕಾಬಂದಿಯನ್ನು ಹಾಕಿದ್ದರು. ಅಮೃತ್‌ಪಾಲ್ ಮತ್ತು ಆತನ ಸಹಚರರು ಮರ್ಸಿಡಿಸ್ ಸೇರಿ ನಾಲ್ಕು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ನಾಕಾಬಂದಿಯ ಬಳಿ ಕಾರುಗಳನ್ನು ನಿಲ್ಲಿಸುವಂತೆ ಅಮೃತ್‌ಪಾಲ್ ಅವರಿಗೆ ನಿರ್ದೇಶಿಸಲಾಗಿತ್ತು. ಆದರೆ, ಕಾರುಗಳನ್ನು ನಿಲ್ಲಿಸದ ಅವರು ನಾಕಾಬಂದಿಯನ್ನು ಗುದ್ದಿಕೊಂಡು ಪರಾರಿಯಾದರು’ ಎಂದರು.
‘ತಕ್ಷಣವೇ ಹತ್ತಿರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹಾಗೂ ಜಿಲ್ಲಾ ಠಾಣೆಗಳಿಗೆ ವಾಹನಗಳ ಕುರಿತು ಮಾಹಿತಿ ರವಾನಿಸಲಾಯಿತು. ಜಲಂಧರ್‌ನ ಸಲೇಮಾ ಗ್ರಾಮದ ಸರ್ಕಾರಿ ಶಾಲೆಯೊಂದರ ಬಳಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ್ದನ್ನು ಪತ್ತೆಹಚ್ಚಲಾಯಿತು. ಅಮೃತ್‌ಪಾಲ್ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ತಮ್ಮ ಬಳಿ ಇದ್ದ ರೈಫಲ್‌ಗಳನ್ನು ತೋರಿಸಿದರು. ಅಲ್ಲಿಂದ ಅವರು ಕಾರುಗಳಲ್ಲಿ ನಾಪತ್ತೆಯಾದರು’ ಎಂದರು.
ಪರಾರಿಗೆ ಸಹಕಾರ: ನಾಲ್ವರ ಬಂಧನ
ಅಮೃತ್‌ಪಾಲ್ ಅವರು ಪರಾರಿಯಾಗಲು ಸಹಕರಿಸಿದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ಹೇಳಿದ್ದಾರೆ.
ಪರಾರಿಯಾದ ಅಮೃತ್‌ಪಾಲ್ ಜಲಂಧರ್‌ನ ನಂಗಾಲ್ ಅಂಬಿಯನ್ ಗ್ರಾಮದ ಗುರುದ್ವಾರಕ್ಕೆ ತೆರಳಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ ಎಂದರು. ನಂತರ ಗುರುದ್ವಾರದಿಂದ ಬಟ್ಟೆಯನ್ನು ಬದಲಾಯಿಸಿಕೊಂಡು, ಪ್ಯಾಂಟು ಹಾಗೂ ಶರ್ಟ್ ಧರಿಸಿ ತನ್ನ ಮೂವರು ಸಹಚರರೊಂದಿಗೆ ಬೈಕ್‌ನಲ್ಲಿ ಪರಾರಿಯಾದರು ಎಂದು ಪೊಲೀಸ್ ಮಹಾನಿರೀಕ್ಷಕ ಸುಖ್‌ಚೈನ್ ಸಿಂಗ್ ಗಿಲ್ ತಿಳಿಸಿದರು.
‘ಸೌಹಾರ್ದಕ್ಕೆ ಧಕ್ಕೆ ಒದಗಿದರೆ ಕಠಿಣ ಕ್ರಮ’
‘ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದ ಕೆಲಸ ಮಾಡುತ್ತಿರುವ ಹಾಗೂ ದ್ವೇಷ ಭಾಷಣದ ಮೂಲಕ ರಾಜ್ಯದ ಶಾಂತಿಯನ್ನು ಹಾಳುಗೆಡುವುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ಹೇಳಿದರು.
‘ದ್ವೇಷ ಭಾಷಣ ಮಾಡಿ, ಕಾನೂನಿನ ವಿರುದ್ಧ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾಕೆಂದರೆ, ರಾಜ್ಯದಲ್ಲಿ ‘ಕಟ್ಟರ್ ದೇಶಭಕ್ತ ಹಾಗೂ ಪ್ರಾಮಾಣಿಕ’ವಾಗಿರುವ ಆಮ್ ಆದ್ಮಿ ಪಕ್ಷದ ಸರ್ಕಾರ ಇದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.