HP Polls: 62 ಸ್ಥಾನಗಳಿಗೆ ಬಿಜೆಪಿ ಪಟ್ಟಿ ಪ್ರಕಟ, 11 ಶಾಸಕರಿಗಿಲ್ಲ ಟಿಕೆಟ್

ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 62 ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಪ್ರಕಟಿಸಿದೆ.
ಆದರೆ ಸಂಪುಟ ಸಚಿವರೊಬ್ಬರು ಸೇರಿದಂತೆ 11 ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ನಿರಾಕರಿಸಲಾಗಿದೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಸಿರಾಜ್‌ನಿಂದ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಖರ್ಗೆ vs ತರೂರ್: ಇಂದು ಮತ ಎಣಿಕೆ; ಯಾರಾಗಲಿದ್ದಾರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ?
ಸಚಿವರಾದ ಸುರೇಶ್ ಭಾರದ್ವಾಜ್ ಮತ್ತು ರಾಕೇಶ್ ಪಟಾನಿಯ ಸ್ಪರ್ಧಾ ಕ್ಷೇತ್ರವನ್ನು ಬದಲಿಸಲಾಗಿದ್ದು, ಶಿಮ್ಲಾ ನಗರ ಕ್ಷೇತ್ರದ ಹಾಲಿ ಶಾಸಕ ಭಾರದ್ಜಾಜ್ ಅವರಿಗೆ ಕಸುಂಪ್ಟಿ ಮತ್ತು ನೂರ್‌ಪುರ ಶಾಸಕ ಪಟಾನಿಯ ಅವರಿಗೆ ಫತೇಪುರ ಪ್ರದೇಶದಿಂದ ಟಿಕೆಟ್ ನೀಡಲಾಗಿದೆ.
ಸಚಿವ, ಧರಂಪುರದ ಶಾಸಕ ಮಹೇಂದ್ರ ಸಿಂಗ್ ಬದಲಿಗೆ ಅವರ ಪುತ್ರ ರಜತ್ ಠಾಕೂರ್‌ಗೆ ಅವಕಾಶ ನೀಡಲಾಗಿದೆ. ಮಾಜಿ ಕೇಂದ್ರ ಸಚಿವ ಸುಖ್‌ರಾಮ್ ಪುತ್ರ ಅನಿಲ್ ಶರ್ಮಾ ಮಂಡಿಯಿಂದ ಸ್ಪರ್ಧಿಸಲಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂಟು ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. ಮೂರು ಸ್ಥಾನ ಎಸ್‌ಟಿ ವರ್ಗದ ಅಡಿಯಲ್ಲಿ ಮೀಸಲಿಡಲಾಗಿದೆ. ಒಟ್ಟಾರೆ ಪಟ್ಟಿಯಲ್ಲಿ ಐವರು ಮಹಿಳಾ ಅಭ್ಯರ್ಥಿಗಳಿದ್ದಾರೆ.
ಸೋಮವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಅಕ್ಟೋಬರ್ 25 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.