ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ: ಪಶ್ಚಿಮ ಬಂಗಾಳ ಪ್ರಚಾರದಲ್ಲಿ ಮೋದಿ ಹರ್ಷ

ಪಶ್ಚಿಮ ಬಂಗಾಳ ಪ್ರಚಾರ ಸಭೆಯಲ್ಲಿ ಪ್ರಧಾನಿ ಹರ್ಷ
Last Updated 18 ಏಪ್ರಿಲ್ 2021, 20:17 IST
ಅಕ್ಷರ ಗಾತ್ರ

ಅಸ್ಸನ್‌ಸೋಲ್‌ (ಪಶ್ಚಿಮ ಬಂಗಾಳ): ಕೋವಿಡ್‌ನ ಹೊಸ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ, ‘ಇಷ್ಟು ಜನ ಸೇರಿರುವುದನ್ನುಇದೇ ಮೊದಲ ಬಾರಿ ನೋಡುತ್ತಿದ್ದೇನೆ’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಭಾನುವಾರ ವೈರಲ್ ಆಗಿದೆ. ಮೋದಿ ಅವರ ಈ ಪ್ರಚಾರ ಸಭೆ ಮತ್ತು ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ಅಸ್ಸನ್‌ಸೋಲ್‌ನಲ್ಲಿ ಏಳನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಸಲುವಾಗಿ ಬಿಜೆಪಿ ಇಲ್ಲಿ ಹಲವು ಪ್ರಚಾರ ಸಭೆಗಳನ್ನು ಹಮ್ಮಿಕೊಂಡಿದೆ. ಶನಿವಾರ ರಾತ್ರಿ ಇಲ್ಲಿ ಸಭೆಯನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಿದ್ದರು. ‌‘ಇಲ್ಲಿಗೆ ಈ ಹಿಂದೆ ಎರಡು ಬಾರಿ ಬಂದಿದ್ದೆ. ಕಳೆದ ಬಾರಿ ಬಾಬುಲ್ ಸುಪ್ರಿಯೊ ಪರವಾಗಿ ಮತ ಕೇಳಲು ಬಂದಿದ್ದೆ. ಅದಕ್ಕೂ ಹಿಂದೆ, ನನಗಾಗಿ ಮತ ಕೇಳಲು ಬಂದಿದ್ದೆ. ಆದರೆ ಆಗ ಸೇರಿದ್ದ ಜನ ಇದರ ಅರ್ಧದಷ್ಟೂ ಇರಲಿಲ್ಲ’ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದರು.

‘ಆದರೆ, ಇವತ್ತು ನೋಡುತ್ತಿದ್ದೇನೆ. ಎಲ್ಲಾ ದಿಕ್ಕಿನಲ್ಲೂ ಜನರು ತುಂಬಿದ್ದಾರೆ. ಇದೇ ಮೊದಲ ಬಾರಿ ಇಷ್ಟೊಂದು ಜನ ಸೇರಿರುವುದನ್ನು ನೋಡುತ್ತಿದ್ದೇನೆ. ಇವತ್ತು ನೀವು, ನಿಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದೀರಿ. ಇಷ್ಟೇ ಸಂಖ್ಯೆಯಲ್ಲಿ ಬಂದು ಮತ ಹಾಕುವುದು ಮುಂದಿನ ಹಂತ. ಅದನ್ನೂ ಮಾಡಿ’ ಎಂದು ಮೋದಿ ಅವರು ಕರೆ ನೀಡಿದ್ದರು.

ಮೋದಿ ಅವರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸದೇ ಇದ್ದುದನ್ನು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿವೆ. ಜನರು ಅಂತರ ಕಾಯ್ದುಕೊಳ್ಳದೆ ಒತ್ತೊತ್ತಾಗಿ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ವತಃ ಪ್ರಧಾನಿ ಅವರೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸದೇ ಇರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಮಧ್ಯೆಯೇ ಮೋದಿ ಅವರು ಬೃಹತ್ ಪ್ರಚಾರ ಸಭೆಗಳನ್ನು ನಡೆಸುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳೂ ಭಾರಿ ಆಕ್ಷೇಪ ವ್ಯಕ್ತಪಡಿಸಿವೆ.

ಇದರ ಮಧ್ಯೆಯೇ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸಿ ಸಭೆಯಲ್ಲಿ ಭಾಗವಹಿಸಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಮೋದಿ ಅವರ ಪ್ರಚಾರ ಸಭೆಯಲ್ಲಿ ಅಂತರ ಕಾಯ್ದುಕೊಳ್ಳಲಾಗಿತ್ತು ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಹಲವರು, ‘ಇದು ಬೇರೆ ಸಭೆಯ ಚಿತ್ರ. ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನುಡಿ-ಕಿಡಿ

ದೇಶದಲ್ಲಿ ಇದೇ ಮೊದಲ ಬಾರಿ, ಇಷ್ಟೊಂದು ಜನರು ಸೋಂಕಿಗೆ ಒಳಗಾಗಿರುವುದು ಮತ್ತು ಇಷ್ಟೊಂದು ಜನರು ಸೋಂಕಿನಿಂದ ಸಾಯುತ್ತಿರುವುದನ್ನು ನೋಡುತ್ತಿದ್ದೇವೆ

- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಬಿಜೆಪಿ ಅವರು ಬೇರೆ ರಾಜ್ಯಗಳಿಂದ ಜನರನ್ನು ಕರೆದುಕೊಂಡು ಬಂದು ಪ್ರಚಾರ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭಾರಿ ಸಭೆಗಳನ್ನು ನಡೆಸುವ ಮೂಲಕ ರಾಜ್ಯದಲ್ಲಿ ಕೋವಿಡ್‌ ಅನ್ನು ಹರಡುತ್ತಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಹೊಣೆ ಹೊತ್ತು ಮೋದಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಪಶ್ಚಿಮ ಬಂಗಾಳವನ್ನು ತೆಕ್ಕೆಗೆ ತೆಗೆದುಕೊಳ್ಳುವ ಮಹತ್ವದ ಮತ್ತು ತುರ್ತಿನ ಯುದ್ಧದ ಮಧ್ಯೆ, ಕೋವಿಡ್‌ ನಿಯಂತ್ರಣಕ್ಕೆ ಸಮಯ ಮಾಡಿಕೊಳ್ಳುತ್ತಿರುವ ಮೋದಿಗೆ ಧನ್ಯವಾದಗಳು

- ಪಿ.ಚಿದಂಬರಂ, ಕಾಂಗ್ರೆಸ್ ನಾಯಕ

ರೋಮ್ ಹೊತ್ತಿ ಉರಿಯುವಾಗ ನೀರೊ ಪಿಟೀಲು ಬಾರಿಸುತ್ತಿದ್ದ. ಭಾರತವು ಕೋವಿಡ್ ಸಾಂಕ್ರಾಮಿಕದಲ್ಲಿ ನಲಗುವಾಗ ಮೋದಿ, ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ

- ಕಾಂಗ್ರೆಸ್‌ ಟ್ವೀಟ್

ಕೋವಿಡ್‌ ನಿಯಂತ್ರಿಸಲು ನಮ್ಮಲ್ಲಿ ಕೇಂದ್ರ ಸರ್ಕಾರವಿಲ್ಲ, ಬದಲಿಗೆ ಪಿಆರ್‌ ಕಂಪನಿ ಇದೆ. ಪಕ್ಷದ ತಾರಾ ಪ್ರಚಾರಕನಾಗಿ ಮೋದಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ದೇಶದ ಪ್ರಧಾನಿಯಾಗಿ ಅಲ್ಲ

- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

***

ಪ್ರಚಾರ ರದ್ದುಮಾಡಿದ ರಾಹುಲ್ ಗಾಂಧಿ

ನವದೆಹಲಿ (ಪಿಟಿಐ): ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಯೋಜಿಸಲಾಗಿದ್ದ ಎಲ್ಲಾ ಚುನಾವಣಾ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

‘ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು, ನನ್ನ ಎಲ್ಲಾ ಚುನಾವಣಾ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ಪ್ರಚಾರ ಸಭೆಗಳನ್ನು ನಡೆಸುವ ಬಗ್ಗೆ ರಾಜಕೀಯ ನಾಯಕರು ಮತ್ತೊಮ್ಮೆ ಯೋಚಿಸಬೇಕು’ ಎಂದು ರಾಹುಲ್ ಅವರು ಟ್ವೀಟ್‌ನಲ್ಲಿ ಕರೆ ನೀಡಿದ್ದಾರೆ.

ರಾಹುಲ್ ಅವರ ಈ ಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಸ್ವಾಗತಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ಹಲವರು ಹೇಳಿದ್ದಾರೆ. ‘ನಿಜವಾದ ನಾಯಕ ಮಾತ್ರ ಇಂತಹ ಸಂದರ್ಭದಲ್ಲಿ, ಇಂತಹ ಮಹತ್ವದ ಕ್ರಮ ತೆಗೆದುಕೊರ್ಳಳುತ್ತಾನೆ’ ಎಂದು ಪ್ರೀತಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

‘ಮಹತ್ವದ ನಿರ್ಧಾರ. ಬಿಜೆಪಿ ನಾಯಕರ ಕ್ರಮಗಳಿಂದಾಗಿ ದೇಶವು ಕೋವಿಡ್‌ನಿಂದ ಬಳಲುತ್ತಿದೆ. ಬಿಜೆಪಿ ನಾಯಕರೂ ರಾಹುಲ್ ಅವರನ್ನು ಅನುಸರಿಸಬೇಕು’ ಎಂದು ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೂ, ರಾಹುಲ್ ಗಾಂಧಿ ಅವರನ್ನು ಅನುಸರಿಸಬೇಕು. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಮೋದಿ ಅವರು ಕೈಬಿಡಬೇಕು ಎಂದು ಹಲವರು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

‘ರಾಹುಲ್ ಅವರು ಈ ನಿರ್ಧಾರ ತೆಗೆದುಕೊಂಡು, ಒಂದು ನಿದರ್ಶನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಪ್ರಚಾರ ಸಭೆಗಳನ್ನು ಕೈಬಿಡಬೇಕು’ ಎಂದು ಚಿರಾಶ್ ಭಾಟಿಯಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರು ತಮ್ಮ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದಾರೆ. ಕೋವಿಡ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಹೀಗೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.


180ರಲ್ಲಿ 122 ಗೆಲ್ಲುತ್ತೇವೆ: ಶಾ

ಸ್ವರೂಪನಗರ (ಪಶ್ಚಿಮ ಬಂಗಾಳ): ಈವರೆಗೆ ಐದು ಹಂತದಲ್ಲಿ 180 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ 122 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಸ್ವರೂಪನಗರ ಮತ್ತು ಪೂರ್ವಾಸ್ಥಲಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಅವರು ಇದನ್ನು ಪುನರುಚ್ಚರಿಸಿದ್ದಾರೆ. ‘ಐದು ಹಂತದ ಮತದಾನ ನಡೆದ ಮೇಲೆ ತಾವು ಸೋಲುತ್ತೇವೆ ಎಂಬುದು ಮಮತಾ ಬ್ಯಾನರ್ಜಿ ಅವರಿಗೆ ಮನದಟ್ಟಾಗಿದೆ. ಹೀಗಾಗಿ ಅವರು ಕುಸಿದುಹೋಗಿದ್ದಾರೆ. ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಗೆಲ್ಲಲಿದ್ದಾರೆ, ಮಮತಾ ಮನೆಗೆ ನಡೆಯಲಿದ್ದಾರೆ’ ಎಂದು ಶಾ ಘೋಷಿಸಿದ್ದಾರೆ.

ಅಲ್ಲಲ್ಲಿ ಘರ್ಷಣೆ

ಜಲಪೈಗುರಿ (ಪಿಟಿಐ): ಶನಿವಾರ 5ನೇ ಹಂತದ ಮತದಾನ ನಡೆದ ಹಲವು ಕ್ಷೇತ್ರಗಳಲ್ಲಿ ಭಾನುವಾರ ಘರ್ಷಣೆ ನಡೆದಿದೆ. ಜಲಪೈಗುರಿ ಜಿಲ್ಲೆಯ ಫೂಲ್‌ಬರಿ ಕ್ಷೇತ್ರದ ಹಲವೆಡೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಹಲವರಿಗೆ ಗಾಯಗಳಾಗಿವೆ.

ಈ ಸಂಬಂಧ ಇಲ್ಲಿನ ಬಿಜೆಪಿ ಅಭ್ಯರ್ಥಿ ಸಿಖಾ ಚಟರ್ಜಿ ಅವರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ‘ನಮ್ಮ ಪಕ್ಷದ ಇಬ್ಬರು ಕಾರ್ಯಕರ್ತರ ಮೇಲೆ ಟಿಎಂಸಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರ ಮನೆಗೆ ನುಗ್ಗಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಅವರು ದೂರಿದ್ದಾರೆ.

ಬಿಜೆಪಿ ಕಾರ್ಯಕರ್ತನ ಸಾವು: ನಾದಿಯಾ ಜಿಲ್ಲೆಯ ಚಾಕ್ಡಾ ಗ್ರಾಮದ ಕೆರೆಯ ಬಳಿ ಬಿಜೆಪಿ ಕಾರ್ಯಕರ್ತನ ಶವ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಈ ಸಂಬಂಧ ಪಕ್ಷದ ನಾಯಕರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಟಿಎಂಸಿಯ ಗೂಂಡಾಗಳು ನಮ್ಮ ಪಕ್ಷದ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆಯ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT