ಭಾನುವಾರ, ಜನವರಿ 24, 2021
17 °C

ತೆಲಂಗಾಣ: ಪಾಲಿಕೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ವರಿಷ್ಠರು

ಪ್ರಸಾದ್‌ ನಿಚ್ಚಿನಮೆಟ್ಲ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮಹಾನಗರಪಾಲಿಕೆ ಚುನಾವಣೆಯನ್ನು ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯ ಕೇಂದ್ರ ನಾಯಕತ್ವವು ಬಳಸಿಕೊಳ್ಳುತ್ತಿದೆ. ಕೇಂದ್ರ ನಾಯಕರ ದಂಡೇ ಚುನಾವಣಾ ಪ್ರಚಾರಕ್ಕೆ ಧುಮುಕಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ನಗರ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲು ಇರಬೇಕು ಎಂದು ತೆಲಂಗಾಣ ಬಿಜೆಪಿಯ ಮುಖಂಡರೊಬ್ಬರು ಹೇಳುತ್ತಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೈದರಾಬಾದ್‌ನಲ್ಲಿ ಶುಕ್ರವಾರ ಪ್ರಚಾರ ನಡೆಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ಹೈದರಾಬಾದ್‌ಗೆ ಬರಲಿದ್ದಾರೆ. ಎರಡು ದಿನಗಳ ಬಳಿಕ, ಅಂದರೆ ಡಿಸೆಂಬರ್‌ 1ರಂದು ಗ್ರೇಟರ್‌ ಹೈದರಾಬಾದ್‌ ಮಹಾನಗರಪಾಲಿಕೆಗೆ ಚುನಾವಣೆ ನಡೆಯಲಿದೆ. 

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿಶನ್‌ ರೆಡ್ಡಿ ಅವರು ಹೈದರಾಬಾದ್‌ನವರು. ಅವರ ಜತೆಗೆ, ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಸ್ಮೃತಿ ಇರಾನಿ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಹೈದರಾಬಾದ್‌ನ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. 

‘ಡುಬ್ಬಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಈಗ ಹುಮ್ಮಸ್ಸಿನಲ್ಲಿದೆ. ಕಾರ್ಯಕರ್ತರಲ್ಲಿ ಈ ಹುಮ್ಮಸ್ಸನ್ನು ಇನ್ನಷ್ಟು ವೃದ್ಧಿಸಬೇಕು’ ಎಂದು ಬಿಜೆಪಿಯ ಹೈದರಾಬಾದ್‌ ಘಟಕದ ಅಧ್ಯಕ್ಷ ರಾಮಚಂದ್ರ ರಾವ್‌ ಹೇಳುತ್ತಾರೆ.

ಪ್ರತ್ಯೇಕ ರಾಜ್ಯ ಹೋರಾಟದ ಮೂಲಕ 2014ರಲ್ಲಿ ಅಧಿಕಾರಕ್ಕೆ ಏರಿದ ಟಿಆರ್‌ಎಸ್‌, ಈವರೆಗೆ ಅಜೇಯ ಎಂದೇ ಕಾಣಿಸುತ್ತಿತ್ತು. ಆದರೆ, ಟಿಆರ್‌ಎಸ್‌ ಭದ್ರಕೋಟೆ ಡುಬ್ಬಾಕ ಕ್ಷೇತ್ರವನ್ನು ಆ ಪ‍ಕ್ಷದಿಂದ ಕಸಿದುಕೊಂಡಿರುವುದು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಅನಿರೀಕ್ಷಿತ ಗೆಲುವಿನಿಂದಾಗಿ ಬಿಜೆಪಿ ಕೇಂದ್ರ ನಾಯಕತ್ವವು ತೆಲಂಗಾಣದತ್ತ ಗಮನ ಹರಿಸಿದೆ.

2023ರಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೈದರಾಬಾದ್‌ನಲ್ಲಿ ಬೇರುಗಳನ್ನು ಗಟ್ಟಿಗೊಳಿಸಿದರೆ ವಿಧಾನಸಭೆಯ ಹಾದಿ ಸುಗಮ ಎಂದು ಬಿಜೆಪಿ ಭಾವಿಸಿದೆ. ತೆಲಂಗಾಣದ 119 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳು ಹೈದರಾಬಾದ್‌ ನಗರದಲ್ಲೇ ಇವೆ. ಕಾಂಗ್ರೆಸ್‌ ಪಕ್ಷವು ಕುಸಿಯುತ್ತಲೇ ಇದೆ. ಹಾಗಾಗಿ, ತೆಲಂಗಾಣದಲ್ಲಿ ಪ್ರಬಲ ಪಕ್ಷವಾಗಿ ಹೊಮ್ಮಲು ಮುಂದಿನ ಮೂರು ವರ್ಷಗಳು ಸಾಕು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಇದೆ.

ಮೋದಿಗೆ ಸವಾಲು
‘ಪ್ರಚಾರಕ್ಕೆ ಮೋದಿ ಅವರನ್ನೂ ಕರೆತನ್ನಿ, ನೀವು ಎಷ್ಟು ಸೀಟು ಗೆಲ್ಲಲು ಸಾಧ್ಯವೋ ನಾವೂ ನೋಡುತ್ತೇವೆ’ ಎಂದು ಒವೈಸಿ ಅವರು ಸವಾಲು ಎಸೆದಿದ್ದಾರೆ.

ಮೋದಿ ಅವರು ಕೂಡ ಹೈದರಾಬಾದ್‌ಗೆ ಪ್ರಚಾರಕ್ಕೆ ಬರಲಿದ್ದಾರೆ ಎಂಬ ವದಂತಿ ಇತ್ತು. ಆದರೆ, ಮೋದಿ ಅವರು ಬರುವುದಿಲ್ಲ ಎಂದು ರಾಮಚಂದ್ರ ರಾವ್‌ ಸ್ಪಷ್ಟಪಡಿಸಿದ್ದಾರೆ. ಮೋದಿ ಅವರು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಸಂಸ್ಥೆಗೆ ಶನಿವಾರ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭಾರತ್‌ ಬಯೊಟೆಕ್‌ ಸಂಸ್ಥೆಯು ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌’ ಅನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ
ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಅವರ ಬೆಂಬಲಿಗರ ವಿರುದ್ಧ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣ ಹೋರಾಟದ ಹುತಾತ್ಮರಿಗೆ ನಮನ ಸಲ್ಲಿಸಲು, ಬ್ಯಾರಿಕೇಡ್‌ಗಳನ್ನು ತೆಗೆದು ತೇಜಸ್ವಿ ಸೂರ್ಯ ಮಂಗಳವಾರ ಕ್ಯಾಂಪಸ್‌ ಒಳಗೆ ಪ್ರವೇಶಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು