ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕುರಿತು ಹ್ಯುಂಡೈ ವಿವಾದಿತ ಟ್ವೀಟ್‌: ಭಾರತದಲ್ಲಿ ಆಕ್ರೋಶ, ಕ್ಷಮೆ ಯಾಚನೆ

Last Updated 8 ಫೆಬ್ರುವರಿ 2022, 13:15 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರಕ್ಕೆ ಸಂಬಂಧಿಸಿ, ಕಾರು ತಯಾರಕ ಸಂಸ್ಥೆ ಹುಂಡೈನ ಪೋಸ್ಟ್‌ ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಕೊರಿಯಾ ಮೂಲದ ಸಂಸ್ಥೆಯು ಭಾರತೀಯರ ಕ್ಷಮೆ ಕೋರಿದೆ. ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಭಾರತವು ಹ್ಯುಂಡೈಗೆ ಎರಡನೇ ಮನೆ ಇದ್ದಂತೆ ಎಂದು ಹೇಳಿದೆ.

ಫೆಬ್ರವರಿ 5 ರಂದು ಹ್ಯುಂಡೈನ ಪಾಕಿಸ್ತಾನ ಘಟಕದ ಅಧಿಕೃತ ಟ್ವಿಟರ್‌ ಖಾತೆಯಿಂದ ಕಾಶ್ಮೀರಕ್ಕೆ ಸಂಬಂಧಿಸಿದ ಪೋಸ್ಟ್‌ವೊಂದನ್ನು ಪ್ರಕಟಿಸಲಾಗಿತ್ತು. ‘ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನಾವು ಸ್ಮರಿಸೋಣ ಮತ್ತು ಅವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ’ ಎಂದು ಟ್ವೀಟ್‌ ಮಾಡಲಾಗಿತ್ತು.

ಪಾಕಿಸ್ತಾನವು ಕಾಶ್ಮೀರದಲ್ಲಿ 'ಪ್ರತ್ಯೇಕತಾವಾದಿ' ಆಂದೋಲನಕ್ಕೆ ಬೆಂಬಲವಾಗಿ ಫೆಬ್ರವರಿ 5 ಅನ್ನು 'ಕಾಶ್ಮೀರ ಐಕಮತ್ಯದ ದಿನ' ಎಂದು ಆಚರಿಸುತ್ತದೆ.

ಹುಂಡೈನ ಪಾಕಿಸ್ತಾನ ಘಟಕದ ಟ್ವಿಟರ್‌ನಿಂದ ಇಂಥ ಪೋಸ್ಟ್‌ ಹೊಮ್ಮುತ್ತಲೇ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಸಾಮಾಜಿಕ ತಾಣಗಳಲ್ಲಿ ಹುಂಡೈ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು. ಹ್ಯುಂಡೈನ ವಾಹನಗಳನ್ನು ಭಾರತದಲ್ಲಿ ಬಹಿಷ್ಕರಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.

ಇದೇ ಹಿನ್ನೆಲೆಯಲ್ಲಿ ಹುಂಡೈ ಮಂಗಳವಾರ ಸ್ಪಷ್ಟನೆ ನೀಡಿದೆ.

‘ಸಾಮಾಜಿಕ ಮಾಧ್ಯಮದಲ್ಲಿನ ಈ ಅನಧಿಕೃತ ಪೋಸ್ಟ್‌ನಿಂದ ಭಾರತದ ಜನರಿಗೆ ಆದ ಬೇಸರಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ‘ ಎಂದು ಕಂಪನಿ ಹೇಳಿದೆ.

‘ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದೇ ಇರುವುದು ನಮ್ಮ ನೀತಿಯಾಗಿದೆ. ಸಂಸ್ಥೆಯ ಪಾಕಿಸ್ತಾನ ಮೂಲದ ವಿತರಕರು ಟ್ವಿಟರ್‌ ಖಾತೆ ಮೂಲಕ ಮಾಡಿರುವ ಟ್ವೀಟ್‌ ನಮ್ಮ ನೀತಿಗೆ ವಿರುದ್ಧವಾಗಿದೆ ಎಂದೂ ಸಂಸ್ಥೆ ಹೇಳಿದೆ.

‘ಹ್ಯುಂಡೈ ಬ್ರ್ಯಾಂಡನ್ನು ದುರುಪಯೋಗ ಮಾಡಿಕೊಂಡು ಪ್ರಕಟಿಸಲಾದ ಪೋಸ್ಟ್‌ ಅನ್ನು ಡಿಲಿಟ್‌ ಮಾಡಲಾಗಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ,’ ಎಂದು ಹುಂಡೈ ತಿಳಿಸಿದೆ.

‘ಭಾರತವು ಹ್ಯುಂಡೈ ಬ್ರ್ಯಾಂಡ್‌ಗೆ ಎರಡನೇ ನೆಲೆಯಾಗಿದೆ. ಈ ಅಸೂಕ್ಷ್ಮ ಘಟನೆಯನ್ನು ನಾವು ಸಹಿಸುವುದಿಲ್ಲ. ಅಂತಹ ಯಾವುದೇ ದೃಷ್ಟಿಕೋನವನ್ನು ನಾವು ಬಲವಾಗಿ ಖಂಡಿಸುತ್ತೇವೆ‘ ಎಂದು ಹ್ಯುಂಡೈ ಮೋಟಾರ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT