ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾರ್ಥನೆಗಳು ಫಲಿಸಿವೆ, ನನಗಿದು ಎರಡನೇ ಜನ್ಮ: ನಕ್ಸಲರಿಂದ ಬಿಡುಗಡೆಗೊಂಡ ಮನ್ಹಾಸ್

ಕಮಾಂಡೊ ರಾಕೇಶ್ವರ್ ಸಿಂಗ್ ಮನ್ಹಾಸ್ ಮನದ ಮಾತು
Last Updated 17 ಏಪ್ರಿಲ್ 2021, 8:38 IST
ಅಕ್ಷರ ಗಾತ್ರ

ಜಮ್ಮು: ‘ಎಂಥ ಕಠಿಣ ಪರಿಸ್ಥಿತಿಯಲ್ಲೂ ನಾನು ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಬಹಳ ತಾಳ್ಮೆಯಿಂದಿದ್ದೆ.. ಆ ಬಂಧನಿಂದ ಬಿಡುಗಡೆಯಾಗಿ ಬರುತ್ತೇನೆ ಅಂತ ಅಂದಕೊಂಡಿರಲಿಲ್ಲ.. ನನಗೆ ಎರಡನೇ ಜನ್ಮ ಸಿಕ್ಕಿದಂತಾಗಿದೆ..'

ನಕ್ಸಲರ ವಶದಿಂದ ಬಿಡುಗಡೆಯಾಗಿ ತವರಿಗೆ ಮರಳಿರುವ ಸಿಆರ್‌ಪಿಎಫ್ ಕಮಾಂಡೊ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರ ಮನದಾಳದ ಮಾತುಗಳಿವು.

ಛತ್ತೀಸ್‌ಗಡದ ಅರಣ್ಯದಲ್ಲಿ ಏಪ್ರಿಲ್ 3ರಂದು ಸಿಆರ್‌ಪಿಎಫ್ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ರಾಕೇಶ್ವರ್ ಸಿಂಗ್ ನಾಪತ್ತೆಯಾಗಿದ್ದರು. ಆ ನಂತರ ಅವರನ್ನು ನಕ್ಸಲರು ಅಪಹರಿಸಿರುವುದು ಗೊತ್ತಾಯಿತು. ಐದು ದಿನಗಳಕಾಲ ನಕ್ಸಲರ ವಶದಲ್ಲಿದ್ದ ರಾಕೇಶ್ವರ ಸಿಂಗ್ ಏಪ್ರಿಲ್ 8ರಂದು ಬಿಡುಗಡೆಯಾದರು.

ನಕ್ಸಲರಿಂದ ಬಿಡುಗಡೆಯಾದ ಬಳಿಕ ಮನ್ಹಾಸ್ ಅವರು ತಮ್ಮ ಸ್ವಗ್ರಾಮ ಜಮ್ಮುವಿನ ಹೊರ ವಲಯದಲ್ಲಿರುವ ಬರ್ನೈಗೆ ಆಗಮಿಸುತ್ತಿದ್ದಂತೆ, ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಊರಿನ ಹೊರವಲಯದಲ್ಲೇ ಅವರನ್ನು ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ರಾಕೇಶ್ವರ್ ಸಿಂಗ್, ‘ನನ್ನ ತಾಯಿಯ ಪ್ರಾರ್ಥನೆಯಿಂದ ಇಂದು ಜೀವಂತವಾಗಿದ್ದೇನೆ‘ ಎಂದರು.

‘ನಾನು ಬಿಡುಗಡೆಯಾಗುತ್ತೇನೆ ಎಂದು ನನಗೆ ಖಚಿತವಾಗಿರಲಿಲ್ಲ. ಇದು ನನ್ನ ಎರಡನೆಯ ಜನ್ಮ. ಇದನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ. ಅವರ ಪ್ರಾರ್ಥನೆಗಳಿಂದಲೇ ಈ ಹೊಸ ಜನ್ಮ ದೊರೆತಿದೆ. ಏಕೆಂದರೆ, ಇಲ್ಲಿಯವರೆಗೆ ನಕ್ಸಲರ ಸೆರೆಯಿಂದ ಯಾರೂ ಜೀವಂತವಾಗಿ ಮರಳಿಲ್ಲ‘ ಎಂದು ಮನ್ಹಾಸ್ ಹೇಳಿದರು.

ಮನ್ಹಾಸ್ ತಾಯಿ ಕುಂತಿದೇವಿ ‘ನನ್ನ ಮಗನ ಬಿಡುಗಡೆಗಾಗಿ ಮಾತಾ ವೈಷ್ಣೋದೇವಿಯನ್ನು ಪ್ರಾರ್ಥಿಸಿದೆ. ನನ್ನ ಪ್ರಾರ್ಥನೆ ಆ ಮಾತೆಗೆ ತಲುಪಿದೆ. ಮಗ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾನೆ. ದೇವಿಯ ಆಶೀರ್ವಾದದಿಂದ ಮಗ ಜೀವಂತವಾಗಿದ್ದಾನೆ‘ ಎಂದರು.

‘ಒಂದು ಕೆಟ್ಟ ಕಾಲ ಕೊನೆಯಾಗಿದೆ. ನನ್ನ ಪತಿ ಮರಳಿ ಬಂದಿರುವುದು ಸಂತೋಷವಾಗಿದೆ. ನಮ್ಮ ಕುಟುಂಬದರ ಪ್ರಾರ್ಥನೆ ಮತ್ತು ದೇಶದ ಸಾವಿರಾರು ಮಂದಿಯ ಹಾರೈಕೆಯಿಂದ ನನ್ನ ಪತಿ ಸುರಕ್ಷಿತವಾಗಿ ಮರಳಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ‘ ಎಂದು ಹೇಳಿದರು.

‘ರಾಕೇಶ್ವರ್ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಅವರು ಹಳ್ಳಿಗೆ ಮರಳಿರುವುದು ಸಂತಸ ತಂದಿದೆ‘ ಎಂದು ಧೀರಜ್ ಚಾಂದ್ ಹೇಳಿದರು.

ಇದೇ ವೇಳೆ ಅಂದು ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ 22 ಮಂದಿ ಯೋಧರ ಕುಟುಂಬವನ್ನು ನೆನೆದು ರಾಕೇಶ್ವರ್ ತುಂಬಾ ಬೇಸರ ವ್ಯಕ್ತಪಡಿಸಿದರು. ‘ಅವರೆಲ್ಲರ ತ್ಯಾಗವನ್ನು ನಾವೆಂದೂ ಮರೆಯುವಂತಿಲ್ಲ. ಪ್ರತಿಯೊಬ್ಬರು ನಮ್ಮ ದೇಶದ ಹೀರೊ‘ ಎಂದು ಶ್ಲಾಘಿಸಿದರು. ಶೀಘ್ರದಲ್ಲೇ ಸಿಆರ್‌ಪಿಎಫ್‌ ಪಡೆಯನ್ನು ಮತ್ತೆ ಸೇರಿಕೊಳ್ಳುವುದಾಗಿ ಮನ್ಹಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT