ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಅಖಿಲೇಶ್‌ ಆಪ್ತರ ಮೇಲೆ ಐ.ಟಿ. ದಾಳಿ

ಚುನಾವಣೆಗೆ ತಿಂಗಳ ಮೊದಲು ಎಸ್‌ಪಿ ಮುಖಂಡರ ಮನೆಗಳಲ್ಲಿ ಶೋಧ
Last Updated 18 ಡಿಸೆಂಬರ್ 2021, 21:22 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಶನಿವಾರ ಶೋಧ ನಡೆಸಿದ್ದಾರೆ. ಇದು ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಖಿಲೇಶ್ ಹೇಳಿದ್ದಾರೆ.

ಪಕ್ಷದ ಹಿರಿಯ ಮುಖಂಡ ಹಾಗೂ ವಕ್ತಾರ ರಾಜೀವ್ ರಾಯ್, ಅಖಿಲೇಶ್ ಅವರ ಆಪ್ತ ಕಾರ್ಯದರ್ಶಿ ಜೈನೇಂದ್ರ ಯಾದವ್ ಮತ್ತು ಪಕ್ಷದ ಮುಖಂಡ ಮನೋಜ್ ಸಿನ್ಹಾ ಅವರಿಗೆ ಸೇರಿದ ಜಾಗಗಳಲ್ಲಿ ತಪಾಸಣೆ ನಡೆಸಲಾಗಿದೆ.

ಶನಿವಾರ ಬೆಳಗಿನ ಜಾವ ವಾರಾಣಸಿಯಿಂದ ಮೌಗೆ ಬಂದ ಅಧಿಕಾರಿಗಳ ತಂಡ, ರಾಯ್ ಅವರ ಮನೆಯಲ್ಲಿ ತಪಾಸಣೆ ನಡೆಸಿತು. ರಾಯ್ ಅವರು ಕರ್ನಾಟಕ ಸೇರಿದಂತೆ ವಿವಿಧೆಡೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯನ್ನು ರಾಜಕೀಯ ಪ್ರೇರಿತ ಎಂದು ರಾಯ್ ಕರೆದಿದ್ದಾರೆ.

ಮೈನ್‌ಪುರಿ, ಆಗ್ರಾ, ಲಖನೌನಲ್ಲಿಜೈನೇಂದ್ರ ಯಾದವ್ ಹಾಗೂ ಮನೋಜ್ ಯಾದವ್ ಅವರಿಗೆ ಸೇರಿದ ಜಾಗಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿತು. ಅಖಿಲೇಶ್ ಆಪ್ತರಾಗಿರುವ ಇತರರ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇ.ಡಿ., ಸಿಬಿಐ ಶೋಧ ನಿರೀಕ್ಷೆ
ಚುನಾವಣೆಗೂ ಮುನ್ನ ಆದಾಯ ತೆರಿಗೆ ಇಲಾಖೆ ಶೋಧವನ್ನು ಅಖಿಲೇಶ್ ಲೇವಡಿ ಮಾಡಿದ್ದಾರೆ. ‘ಈಗ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಇದಾದ ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐ ದಾಳಿಯಿಡುವ ನಿರೀಕ್ಷೆಯಿದೆ’ ಎಂದಿದ್ದಾರೆ.

ಚುನಾವಣೆ ಹತ್ತರ ಬಂದಿರುವಾಗ ಶೋಧ ನಡೆಸುವ ಬದಲು, ಮೊದಲೇ ಏಕೆ ತಪಾಸಣೆಗೆ ಒಳಪಡಿಸಲಿಲ್ಲ ಎಂದು ಪ್ರಶ್ನಿಸಿರುವ ಅವರು, ‘ರಾಜ್ಯ ವಿಧಾನಸಭಾ ಚುನಾವಣೆಗೆ ಐ.ಟಿ ಇಲಾಖೆಯೂ ಧುಮುಕಿದೆ. ಆದರೆ ಬಿಜೆಪಿ ಧೂಳೀಪಟವಾಗಲಿದೆ’ ಎಂದು ಅವರು ರಾಯ್‌ಬರೇಲಿಯಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮಯದಲ್ಲೂ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರ ಶೋಧ ಕಾರ್ಯಾಚರಣೆ ನಡೆಸಿತ್ತು. ಅದರ ಕಹಿಯನ್ನು ತಾನೇ ಉಂಡಿತ್ತು ಎಂದು ಅಖಿಲೇಶ್ ವಿಶ್ಲೇಷಿಸಿದ್ದಾರೆ.

‘ಉಪಯೋಗಿ ಅಲ್ಲ, ಅನುಪಯೋಗಿ’
ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ ಅವರನ್ನು ‘ಉಪಯೋಗಿ’ ಎಂದು ಕರೆದಿದ್ದಕ್ಕೆ ಪ್ರತಿಯಾಗಿ, ಯೋಗಿ ಸರ್ಕಾರವು ‘ಅನುಪಯೋಗಿ’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ದಲಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

‘ಹಾಥರಸ್‌ನ ಹೆಣ್ಣುಮಗಳು, ಲಖಿಂಪುರದ ರೈತರು, ಗೋರಖಪುರದ ವರ್ತಕರು, ಅಸುರಕ್ಷಿತ ಭಾವದಲ್ಲಿರುವ ಮಹಿಳೆಯರು, ನಿರುದ್ಯೋಗಿ ಯುವಜನರು, ದಲಿತರು, ಹಿಂದುಳಿದ ವರ್ಗದ ಜನರು ಈಗಿನ ರಾಜ್ಯ ಸರ್ಕಾರವು ‘ಅನುಪಯೋಗಿ’ (ವ್ಯರ್ಥ) ಎಂದು ಹೇಳುತ್ತಿದ್ದಾರೆ’ ಎಂದು ಅಖಿಲೇಶ್ ವಿವರಿಸಿದ್ದಾರೆ.ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಬೇಡವಾಗಿದೆ ಎಂದು ಅವರು ಹೇಳಿದ್ದಾರೆ.

*

ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಹೆಚ್ಚಿದಂತೆಲ್ಲಾ, ಶೋಧಗಳೂ ಹೆಚ್ಚಲಿವೆ. 22 ಕೋಟಿ ಜನರು ಬಿಜೆಪಿ ವಿರುದ್ಧವಾಗಿದ್ದಾರೆ, ಇವರೆಲ್ಲರ ತಪಾಸಣೆ ಸಾಧ್ಯವೇ?
-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT