ಬೆಂಗಳೂರು: ಲಂಡನ್ ಭಾಷಣದ ವೇಳೆ ರಾಹುಲ್ ಗಾಂಧಿ ಅವರು ಭಾರತ ಮತ್ತು ಪ್ರಜಾಪ್ರಭುತ್ವದ ಅಪಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿರುವ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡುವ ಮೊದಲು ಮೊದಲು ‘ಸತ್ಯದ ಕನ್ನಡಿ’ ನೋಡಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಚೀನಾ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಮೋದಿ ಅವರು ಆಡಿದ್ದ ಮಾತುಗಳನ್ನು ಮುನ್ನೆಲೆಗೆ ತಂದಿರುವ ಖರ್ಗೆ, ನೀವು ಮಾಡಿದ್ದು ಅಪಮಾನ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಭಾರತದ ಪ್ರಜಾಪ್ರಭುತ್ವ ದಾಳಿಗೀಡಾಗಿದೆ. ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಲಂಡನ್‌ನಲ್ಲಿ ಆರೋಪಿಸಿದ್ದರು. ರಾಹುಲ್ ಗಾಂಧಿ ಅವರ ಅಭಿಪ್ರಾಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರೂ ಸೇರಿದಂತೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವನ್ನು ರಾಹುಲ್ ಅವಹೇಳನ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಅವರ ಈ ಹಿಂದಿನ ಹೇಳಿಕೆಗಳನ್ನು ನೆನಪಿಸುವ ಪ್ರಯತ್ನ ಮಾಡಿದ್ದಾರೆ.
‘ನರೇಂದ್ರ ಮೋದಿ ಅವರೇ, ಚೀನಾದಲ್ಲಿನ ನಿಮ್ಮ ಹೇಳಿಕೆಯನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ನೀವೇ ಹೇಳಿದ್ದು... ‘ನಾನು ಭಾರತೀಯನಾಗಿ ಹುಟ್ಟಿದ್ದಕ್ಕೆ ಮೊದಲು ನಾಚಿಕೆಪಡುತ್ತಿದ್ದೆ. ಈಗ ನಾನು ದೇಶವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೇನೆ’ ಎಂದಿದ್ದಿರಿ. ಇದು ಭಾರತ ಮತ್ತು ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ಇವುಗಳನ್ನು ಮತ್ತೆ ನೆನಪು ಮಾಡಿಕೊಳ್ಳಲು ನಿಮ್ಮ ಮಂತ್ರಿಗಳಿಗೆ ಹೇಳಿ ಎಂದು ಅವರು ಸಲಹೆ ನೀಡಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ನೀವು ಹೀಗೆ ಹೇಳಿದ್ದಿರಿ... ‘ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕಾಗಿ ಭಾರತದಲ್ಲಿ ಹುಟ್ಟಬೇಕಾಗಿ ಬಂದಿದೆ ಎಂದು ಜನ ಒಂದು ಕಾಲದಲ್ಲಿ ಬೇಸರ ಪಡುತ್ತಿದ್ದರು. ಇದೊಂದು ದೇಶವೇ ಎಂದು ಹೇಳುತ್ತಿದ್ದರು’ ಎಂದಿದ್ದಿರಿ . ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡುವ ಮೊದಲು ‘ಸತ್ಯದ ಕನ್ನಡಿ’ ನೋಡಿ! ಎಂದು ಮೋದಿ ಅವರಿಗೆ ಖರ್ಗೆ ಕಿವಿಮಾತು ಹೇಳಿದ್ದಾರೆ.
ಇವುಗಳನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.