ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಕಸಿದ ಕಾಪ್ಟರ್ ದುರಂತ: ಬಡ್ತಿಗೆ ಕಾದಿದ್ದ ಬ್ರಿಗೇಡಿಯರ್‌ ಲಖ್ವಿಂದರ್ ಸಿಂಗ್‌

Last Updated 10 ಡಿಸೆಂಬರ್ 2021, 3:47 IST
ಅಕ್ಷರ ಗಾತ್ರ

ನವದೆಹಲಿ:ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಸೇನಾ ಸಿಬ್ಬಂದಿಯಲ್ಲಿ ಒಬ್ಬರಾದ ಬ್ರಿಗೇಡಿಯರ್‌ ಲಖ್ವಿಂದರ್ ಸಿಂಗ್‌ ಲಿದ್ದರ್‌ ಸದ್ಯದಲ್ಲೇ ಮೇಜರ್‌ ಜನರಲ್‌ ಆಗಿ ಅವರು ಬಡ್ತಿ ಪಡೆಯಲಿದ್ದರು ಎನ್ನಲಾಗಿದೆ.

ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರಿಗೆ ರಕ್ಷಣಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಮೂರೂ ಸೇನೆಗಳ ನಡುವಣ ಸಮನ್ವಯ ಸುಧಾರಣಾ ಯೋಜನೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಲಾಗಿದ್ದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ, ಭಾರತ–ಚೀನಾ ಗಡಿಯಲ್ಲಿ ಸೇನಾ ತುಕಡಿ ಮುನ್ನಡೆಸಿದ್ದರು.

1990ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ನಿಯೋಜನೆಗೊಂಡಿದ್ದರು. ಬಳಿಕ ಅವರು ಸೇನಾ ತುಕಡಿಯನ್ನು ಮುನ್ನಡೆಸಿದ್ದರು. ಕಝಕಿಸ್ತಾನದ ರಾಯಭಾರ ಕಚೇರಿಯಲ್ಲಿಯೂ ಲಿದ್ದರ್‌ ಸೇವೆ ಸಲ್ಲಿಸಿದ್ದರು.

ತಮ್ಮ ಸೇವೆಗಾಗಿ ‘ಸೇನಾ ಪದಕ’ ಮತ್ತು ‘ವಿಶಿಷ್ಠ ಸೇವಾ ಪದಕ’ಗಳನ್ನು ಲಿದ್ದರ್‌ ಪಡೆದಿದ್ದಾರೆ.

ಬ್ರಿಗೇಡಿಯರ್‌ ಲಿದ್ದರ್‌ ಕುರಿತು ಕೇಂದ್ರದ ಮಾಜಿ ಸಚಿವ, ನಿವೃತ್ತ ಯೋಧ ರಾಜ್ಯವರ್ಧನ್‌ ರಾಥೋಡ್‌ಟ್ವೀಟ್‌ ಮಾಡಿದ್ದಾರೆ. ‘ಎನ್‌ಡಿಎಯಲ್ಲಿ ಇಬ್ಬರೂ ಒಟ್ಟಿಗೆ ತರಬೇತಿ ಪಡೆದೆವು. ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಒಟ್ಟಿಗೇ ಹೋರಾಡಿದೆವು. ಬ್ರಿಗೇಡಿಯರ್‌ ಎಲ್‌.ಎಸ್‌. ಲಿದ್ದರ್‌ ನಿಧನದಿಂದ ಒಬ್ಬ ಅಪ್ರತಿಮ ಮತ್ತು ಧೈರ್ಯಶಾಲಿ ಅಧಿಕಾರಿಯನ್ನು ಭಾರತ ಕಳೆದುಕೊಂಡಿದೆ. ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಲಿದ್ದರ್‌ ಹರಿಯಾಣದ ಪಂಚ್‌ಕುಲದವರು. ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT