ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹನಿಟ್ರ್ಯಾಪ್‌’ ಜಾಲಕ್ಕೆ ಬಿದ್ದು ಸೂಕ್ಷ್ಮ ಮಾಹಿತಿ ಸೋರಿಕೆ: ವಾಯುಪಡೆ ಯೋಧ ಬಂಧನ

Last Updated 13 ಮೇ 2022, 5:41 IST
ಅಕ್ಷರ ಗಾತ್ರ

ನವದೆಹಲಿ: ಪಾಕ್‌ ಮೂಲದ ಮಹಿಳೆಯ ‘ಹನಿಟ್ರ್ಯಾಪ್‌’ ಜಾಲಕ್ಕೆ ಬಿದ್ದು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ವಾಯುಪಡೆಯ (ಐಎಎಫ್‌) ಅಧಿಕಾರಿಯೊಬ್ಬರನ್ನು ಬಂಧಿಸಿರುವುದಾಗಿ ಎಂದು ದೆಹಲಿ ಅಪರಾಧ ವಿಭಾಗದ ಪೊಲೀಸರು ಗುರುವಾರ ತಿಳಿಸಿದ್ದಾರೆ.

ವಾಯುಪಡೆಯ ಸಾರ್ಜೆಂಟ್‌ ದೇವೇಂದರ್ ನಾರಾಯಣ್ ಶರ್ಮಾ (32) ಬಂಧಿತ ಅಧಿಕಾರಿ. ನವದೆಹಲಿಯ ಸುಬ್ರೋತೊ ಪಾರ್ಕ್‌ನಲ್ಲಿ ಐಎಎಫ್‌ನ ದಾಖಲೆಗಳ ಕಚೇರಿಯಲ್ಲಿ ಆಡಳಿತ ಸಹಾಯಕರಾಗಿ (ಜಿಡಿ) ಕಾರ್ಯನಿರ್ವಹಿಸುತ್ತಿದ್ದರು.ವಿಚಾರಣೆ ವೇಳೆ ಶರ್ಮಾ, ಪಾಕ್ ಮೂಲದ ಮಹಿಳೆಯ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದಿರುವುದು, ರಾಷ್ಟ್ರೀಯ ಭದ್ರತೆ, ಸೇನೆ ಮತ್ತು ಸೇನಾ ಸಿಬ್ಬಂದಿಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಂಡಿರುವುದು, ಇದಕ್ಕಾಗಿ ಆ ಮಹಿಳೆಯಿಂದ ಹಣ ಪಡೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಪ್ಯೂಟರ್ ಮತ್ತು ಇನ್ನಿತರ ಕಡತಗಳಿಂದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿರುವ ಸಂಬಂಧ ಐಎಎಫ್‌ ನೀಡಿದ ದೂರು ಆಧರಿಸಿ, ಅಧಿಕೃತ ರಹಸ್ಯ ಕಾಯ್ಡೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇದೇ ವರ್ಷದ ಮೇ 6ರಂದು ಶರ್ಮಾ ಅವರನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯಿಂದ ಎಲೆಕ್ಟ್ರಾನಿಕ್ ಸಾಧನಗಳು, ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗೆ (ಐಎಸ್‌ಐ) ರಹಸ್ಯ ದಾಖಲೆಗಳನ್ನು ಒದಗಿಸಿದ ಆರೋಪದ ಮೇಲೆ ಅಧಿಕೃತ ರಹಸ್ಯ ಕಾಯ್ದೆಯಡಿಸೇನಾಧಿಕಾರಿ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT