ಗುರುವಾರ , ಜುಲೈ 29, 2021
25 °C

ಪೋರ್ಟ್‌ ಬ್ಲೇರ್: ಮುಳುಗುತ್ತಿದ್ದ ಹಡಗಿನ 9 ಸಿಬ್ಬಂದಿ ರಕ್ಷಿಸಿದ ಕೋಸ್ಟ್ ಗಾರ್ಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೋರ್ಟ್ ಬ್ಲೇರ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಿಂದ ಒಂಬತ್ತು ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ ಎಂದು ಗುರುವಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್‌ನ ಆಗ್ನೇಯಕ್ಕೆ ಸುಮಾರು 30 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಗಂಗಾ-ಐ ಎಂಬ ಟಗ್ ಬೋಟ್‌ನಿಂದ ಐಸಿಜಿಗೆ ಬುಧವಾರ ತೊಂದರೆ ಆಗಿರುವ ಬಗ್ಗೆ ಅಲರ್ಟ್ ಬಂದಿತ್ತು ಎಂದು ಹೇಳಿಕೆ ತಿಳಿಸಿದೆ.

ಟಗ್ ಬೋಟ್ ಮಂಗಳವಾರ ಮಧ್ಯಾಹ್ನ 1.40 ಕ್ಕೆ ಪೋರ್ಟ್ ಬ್ಲೇರ್‌ನಿಂದ ನಿರ್ಮಾಣ ಸಾಮಗ್ರಿಗಳನ್ನು ತುಂಬಿದ ಬಾರ್ಜ್‌ನೊಂದಿಗೆ ಹೊರಟಿತ್ತು ಎಂದು ಅದು ತಿಳಿಸಿದೆ.

‘ಹಡಗು ಬುಧವಾರ ಬೆಳಿಗ್ಗೆ 6 ಗಂಟೆಗೆ ಹಟ್‌ಬೇಗೆ ಬರಬೇಕಿತ್ತು. ಈ ಮಧ್ಯೆ, ಹಡ್‌ಬೇ ಮಾರ್ಗದಲ್ಲಿ ಹಡಗು ತೆರಳುತ್ತಿದ್ದಾಗ ಎಂಜಿನ್ ಕೋಣೆಯಲ್ಲಿ ಭಾರಿ ಪ್ರವಾಹ ಗಮನಿಸಿದ ಸಿಬ್ಬಂದಿ ಬುಧವಾರ ಬೆಳಿಗ್ಗೆ ನೆರವು ಕೋರಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅನಿಯಂತ್ರಿತ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಹಡಗಿನ ಸಿಬ್ಬಂದಿ ಟಗ್ ಬೋಟ್ ಅನ್ನು ತ್ಯಜಿಸಿ ಸುರಕ್ಷತೆಗಾಗಿ ಬಾರ್ಜ್‌ನಲ್ಲಿ ಆಶ್ರಯ ಪಡೆದಿದ್ದರು ಎಂದು ಅದು ಉಲ್ಲೇಖಿಸಿದೆ.

ತೊಂದರೆಗೀಡಾಗಿರುವ ಸಂಕೇತ ಸ್ವೀಕರಿಸಿದ ನಂತರ, ಐಸಿಜಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

‘ತೊಂದರೆಗೀಡಾದ ಹಡಗಿನ ಸಿಬ್ಬಂದಿ ಸದ್ಯ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಆದರೂ, ಒಬ್ಬ ಸಿಬ್ಬಂದಿ ಕಾಲಿಗೆ ಗಾಯವಾಗಿದ್ದು, ಕೋಸ್ಟ್ ಗಾರ್ಡ್‌ನ ಶಿಪ್ ಸಿ -146ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.

ಟಗ್ ಬೋಟ್‌ನ ಸಿಬ್ಬಂದಿಯನ್ನು ಪೋರ್ಟ್ ಬ್ಲೇರ್‌ಗೆ ಕರೆತಂದು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಜಿ.ಬಿ. ಪಂತ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು