ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೊಪೋರೆ– ಕುಪ್ವಾರ ಹೆದ್ದಾರಿಯಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕಗಳನ್ನು (ಐಇಡಿ) ಪತ್ತೆ ಮಾಡಿ ನಿಷ್ಕ್ರಿಯಗೊಳಿಸುವ ಮೂಲಕ ಸಂಭವನೀಯ ಭಾರಿ ಅನಾಹುತವನ್ನು ಭದ್ರತಾ ಪಡೆಗಳು ಮಂಗಳವಾರ ತಡೆದಿವೆ.
ಸೊಪೋರ್–ಕುಪ್ವಾರ ಬೈಪಾಸ್ ಬಳಿಯ ತುಲಿಬಾಲ್ ಎಂಬಲ್ಲಿ ಐಇಡಿ ಇರಿಸಲಾಗಿತ್ತು. ಸೇನೆಯ ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಕಾರ್ಯಪಡೆ ಸ್ಥಳಕ್ಕೆ ಧಾವಿಸಿ ಸ್ಫೋಟಕಗಳನ್ನು ಪತ್ತೆ ಮಾಡಿತು. ಕೂಡಲೇ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಯಿತು ಮತ್ತು ಜನರ ಓಡಾಟ ನಿರ್ಬಂಧಿಸಲಾಯಿತು. ಸ್ಥಳಕ್ಕೆ ಧಾವಿಸಿದ ಸ್ಫೋಟಕ ನಿಷ್ಕ್ರಿಯ ದಳವು ಯಾವುದೇ ಅಪಾಯಕ್ಕೆ ಆಸ್ಪದ ನೀಡದೇ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿತು. ಆ ಪ್ರದೇಶದಲ್ಲಿ ಕೂಲಂಕಷವಾದ ತಪಾಸಣೆ ನಡೆಸಿದ ಬಳಿಕವೇ ರಸ್ತೆಯನ್ನು ಸಂಚಾರಕ್ಕಾಗಿ ತೆರೆಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಸುಧಾರಿತ ಸ್ಫೋಟಕಗಳನ್ನು ಇರಿಸುವ ಮೂಲಕ ದಾಳಿ ನಡೆಸಲು ಉಗ್ರರು ಕೆಲ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಚುರುಕಾಗಿ ಕ್ರಮ ಕೈಗೊಳ್ಳುವ ಮೂಲಕ ಹಲವಾರು ಐಇಡಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಭದ್ರತಾ ಪಡೆಗಳನ್ನು ನೇರವಾಗಿ ಎದುರಿಸಲು ಉಗ್ರರಿಂದ ಸಾಧ್ಯವಿಲ್ಲದ ಕಾರಣ ಐಇಡಿ ದಾಳಿಗಳು ಭವಿಷ್ಯದಲ್ಲಿ ಹೆಚ್ಚು ನಡೆಯಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.