ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಗೆ ಬನ್ನಿ: ಮತ್ತೆ ಆಹ್ವಾನ

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ
Last Updated 11 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು 11 ದಿನಗಳನ್ನು ಪೂರ್ಣಗೊಳಿಸಿದೆ. ಉತ್ತರ ಪ್ರದೇಶ– ದೆಹಲಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಶುಕ್ರವಾರವೂ ಭಾಗಶಃ ಬಂದ್‌ ಆಗಿದ್ದವು.

ಈ ನಡುವೆ, ‘ಸರ್ಕಾರವು ರೈತ ಮುಖಂಡರ ಜತೆ ಮಾತುಕತೆ ನಡೆಸಲು ಇಚ್ಛಿಸುವುದಾದರೆ ಈ ಹಿಂದೆ ಮಾಡಿರುವಂತೆ, ಅಧಿಕೃತವಾಗಿ ಆಹ್ವಾನ ನೀಡಬೇಕು’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ನ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

‘ಕಾಯ್ದೆಯಲ್ಲಿ ಸರ್ಕಾರವು ಕೆಲವು ತಿದ್ದುಪಡಿಗಳನ್ನು ಮಾಡುವ ಪ್ರಸ್ತಾಪ ಇಟ್ಟಿದ್ದು, ರೈತರು ಈ ಬಗ್ಗೆ ಚಿಂತನೆ ಮಾಡಬೇಕು. ಸಂಘಟನೆಯು ಯಾವಾಗ ಕರೆದರೂ ಮಾತುಕತೆಗೆ ಸಿದ್ಧ’ ಎಂದು ಕೇಂದ್ರ ಸರ್ಕಾರವು ಗುರುವಾರ ಹೇಳಿತ್ತು. ‘ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂಬ ಬೇಡಿಕೆಯಿಂದ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ’ ಎಂದು ಟಿಕಾಯತ್‌ ಹೇಳಿದ್ದಾರೆ.

‘ಸರ್ಕಾರವು ಯಾವಾಗ ಮತ್ತು ಎಲ್ಲಿ ನಮ್ಮನ್ನು ಭೇಟಿಮಾಡಲು ಇಚ್ಛಿಸುತ್ತದೆ ಎಂಬುದನ್ನು ತಿಳಿಸಲಿ. ಅವರು ನಮಗೆ ಅಧಿಕೃತ ಆಹ್ವಾನ ಕಳುಹಿಸಿದರೆ ಸಂಚಾಲನಾ ಸಮಿತಿಯಲ್ಲಿ ಆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕಾಯ್ದೆಗಳು ರದ್ದಾಗುವವರೆಗೂ ಮನೆಗೆ ಹೋಗುವ ವಿಚಾರವೇ ಇಲ್ಲ’ ಎಂದು ಅವರು ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ಸಿಂಗ್‌ ಹೇಳಿಕೆಗೆ ಖಂಡನೆ: ‘ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸ ಲಾಗುವುದು. ರಾಷ್ಟ್ರದಾದ್ಯಂತ ರೈಲು ತಡೆ ನಡೆಸಲಾಗುವುದು’ ಎಂದು ರೈತ ಸಂಘಟನೆಗಳು ಗುರುವಾರ ಹೇಳಿದ್ದವು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌, ‘ಕಾಯ್ದೆಗಳ ಬಗ್ಗೆ ಅವರಿಗೆ (ರೈತರಿಗೆ) ಏನಾದರೂ ಆಕ್ಷೇಪಗಳಿದ್ದರೆ ಮಾತು ಕತೆಗೆ ಸರ್ಕಾರ ಸಿದ್ಧವಿದೆ. ಮಾತುಕತೆಯ ದಿನಾಂಕವನ್ನು ನಿಗದಿಮಾಡುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆ. ಈ ಸಂದರ್ಭದಲ್ಲಿ ಹೋರಾಟವನ್ನು ತೀವ್ರಗೊಳಿಸುವುದು ಸರಿಯಲ್ಲ’ ಎಂದಿದ್ದಾರೆ.

‘ಹಟ ಹಿಡಿದಿರುವುದು ಸರ್ಕಾರವೇ ವಿನಾ ರೈತರಲ್ಲ. ಬೇಡಿಕೆಗಳು ಈಡೇರ ದಿದ್ದರೆ ಮುಂದಿನ ದಿನಗಳಲ್ಲಿ ಹೋರಾ ಟವನ್ನು ತೀವ್ರಗೊಳಿಸಲಾಗುವುದು’ ಎಂದು ಅಖಿಲ ಭಾರತ ಕಿಸಾನ್‌ಸಭಾ ಹೇಳಿದೆ.

***

ದಿನಾಂಕವನ್ನು ಶೀಘ್ರ ನಿರ್ಧರಿಸುವಂತೆ ನಾನು ರೈತರಲ್ಲಿ ಮನವಿ ಮಾಡಿದ್ದೇನೆ. ಮಾತುಕತೆ ನಡೆಯುತ್ತಿರುವಾಗ ಇನ್ನೊಂದು ಹಂತದ ಹೋರಾಟವನ್ನು ಘೋಷಿಸುವುದು ಸೂಕ್ತವಲ್ಲ

- ನರೇಂದ್ರಸಿಂಗ್‌ ತೋಮರ್‌, ಕೃಷಿ ಸಚಿವ

***

ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹಟ ಹಿಡಿದಿರುವುದು ಸರ್ಕಾರವೇ ವಿನಾ ರೈತರಲ್ಲ. ಮಾತು ಕತೆಗೆ ಬರುವುದಿಲ್ಲ ಎಂದು ರೈತ ಸಂಘಟನೆಗಳು ಯಾವತ್ತೂ ಹೇಳಿಲ್ಲ

- ಆಲ್‌ಇಂಡಿಯ ಕಿಸಾನ್‌ ಸಂಘರ್ಷ ಕೊಆರ್ಡಿನೇಷನ್‌ ಕಮಿಟಿ

***

ಮಾಹಿತಿ ಅಭಿಯಾನಕ್ಕೆ ಸಿದ್ಧತೆ

ರೈತರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಬಗ್ಗೆ ಮಾತನಾಡುತ್ತಿದ್ದರೆ, ಕೃಷಿ ಕಾಯ್ದೆಗಳ ಲಾಭಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರಚಾರ ಅಭಿಯಾನ ನಡೆಸುವುದಾಗಿ ಬಿಜೆಪಿ ತಿಳಿಸಿದೆ.

ದೇಶದ 700 ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಧ್ಯಮ ಗೋಷ್ಠಿಗಳು, ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುವುದು ಎಂದು ಪಕ್ಷ ಹೇಳಿದೆ.

‘ಹೊಸ ಕಾಯ್ದೆಗಳ ವಿಚಾರವಾಗಿ ರೈತರನ್ನು ಹಾದಿತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ರೈತರಲ್ಲಿ ತಪ್ಪು ಭಾವನೆಗಳು ಮೂಡುತ್ತಿವೆ. ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳೆಲ್ಲವೂ ಜತೆಯಾಗಿ ಈ ಕೃತ್ಯ ನಡೆಸುತ್ತಿವೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಂಗ್‌ ಆರೋಪಿಸಿದ್ದಾರೆ.

ಕಾಯ್ದೆಗಳಲ್ಲಿ ಏಳು ಬದಲಾವಣೆಗಳನ್ನು ಮಾಡುವುದಾಗಿ ಕೇಂದ್ರ ಈಗಾಗಲೇ ಭರವಸೆ ನೀಡಿದೆ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT