ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ವರ್ಚಸ್ಸು ಮುಂದುವರಿದರೆ ದೇಶದಲ್ಲಿ ಬದಲಾವಣೆ: ಸಂಜಯ್ ರಾವುತ್‌

Last Updated 1 ಜನವರಿ 2023, 14:09 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಕಳೆದ ವರ್ಷ ಹೊಸ ವರ್ಚಸ್ಸು ತಂದುಕೊಟ್ಟಿತು. ಅದು ಈ ವರ್ಷವೂ ಮುಂದುವರಿದರೆ, 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ದೇಶದಲ್ಲಿ ರಾಜಕೀಯ ಬದಲಾವಣೆ ನೋಡಬಹುದು ಎಂದು ಶಿವಸೇನಾ (ಉದ್ಧವ್‌ ಬಣ) ನಾಯಕ ಸಂಜಯ್ ರಾವುತ್‌ ಹೇಳಿದ್ದಾರೆ.

ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ವಾರದ ಅಂಕಣ ‘ರೋಖ್‌ಠೋಕ್‌’ನಲ್ಲಿ ರಾವುತ್‌ ಅವರು ‘ರಾಹುಲ್‌ ಗಾಂಧಿಯವರು ದೇಶದ ಜನರನ್ನು ಸಂಪರ್ಕಿಸಲು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಹಮ್ಮಿಕೊಂಡಿರುವ ‘ಭಾರತ್‌ ಜೋಡೊ ಯಾತ್ರೆ’ ಕಳೆದ ವರ್ಷ ಯಶಸ್ವಿಯಾಗಿದೆ. ಈ ತಿಂಗಳ ಕೊನೆಯಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾಗುವ ಸಾಧ್ಯತೆ ಇದೆ. ರಾಹುಲ್‌ ತಮ್ಮ ಯಾತ್ರೆಯ ಉದ್ದೇಶ–ಗುರಿ ಸಾಧಿಸುತ್ತಾರೆ. 2022ರ ವರ್ಷವು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಹೊಸ ಹೊಳಪು ಮತ್ತು ವರ್ಚಸ್ಸು ನೀಡಿದೆ. ಈ ಬೆಳವಣಿಗೆ 2023ರಲ್ಲೂ ಉಳಿದರೆ, 2024ರ ಸಾಮಾನ್ಯ ಚುನಾವಣೆಗಳಲ್ಲಿ ದೇಶವು ರಾಜಕೀಯ ಬದಲಾವಣೆ ಕಾಣಲಿದೆ’ ಎಂದು ರಾವುತ್‌ ಭವಿಷ್ಯ ನುಡಿದಿದ್ದಾರೆ.

ರಾಮ ಮಂದಿರದ ಸಮಸ್ಯೆ ಬಗೆಹರಿದಿದೆ. ಹಾಗಾಗಿ, ಇನ್ನು ಈ ವಿಷಯ ಮುಂದಿಟ್ಟುಕೊಂಡು ಮತ ಗಳಿಸಲು ಬಿಜೆಪಿಗೆ ಸಾಧ್ಯವಿಲ್ಲ. ಆದ್ದರಿಂದ ‘ಲವ್ ಜಿಹಾದ್’ ಎಂಬ ಹೊಸ ಆಯಾಮವನ್ನು ಇದಕ್ಕಾಗಿ ಅನ್ವೇಷಿಸಲಾಗುತ್ತಿದೆ.

‘ಸಂಕುಚಿತ ಮನೋಭಾವ ದೂರವಿಡಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಪಕ್ಷದವರಿಗೆ ಹೇಳುವ ಅಗತ್ಯವಿದೆ. ಸಂಕುಚಿತ ಮನೋಭಾವವು ಬಿಜೆಪಿಯ ಆಡಳಿತದಲ್ಲಿ ಅಹಂಕಾರವಾಗಿ ಬೆಳೆದಿದೆ. ವಿರೋಧ ಪಕ್ಷಗಳ ಅಸ್ತಿತ್ವ ಮತ್ತು ಹಕ್ಕುಗಳನ್ನು ಅಂಗೀಕರಿಸಲು ಅವರು ಬಯಸುತ್ತಿಲ್ಲ. ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಒಡಕು ಮೂಡಿಸುವುದು ಹೊಸ ವಿಭಜನೆಗೆ ದಾರಿ ಮಾಡಿಕೊಡುತ್ತದೆ. ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದ್ವೇಷ ಮತ್ತು ವಿಭಜನೆಯ ಬೀಜ ಬಿತ್ತಬಾರದು’ ಎಂದೂ ಅವರು ಹೇಳಿದ್ದಾರೆ.

‘ಹಿಂದೂಗಳನ್ನು ಜಾಗೃತಗೊಳಿಸುವುದು ಬಿಜೆಪಿಯ ಕಾರ್ಯಸೂಚಿ. ಆದರೆ, ಇದು ಸಮಾಜದಲ್ಲಿ ದ್ವೇಷ ಮತ್ತು ವಿಭಜನೆ ಸೃಷ್ಟಿಸುವುದು ಎಂದರ್ಥವಲ್ಲ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಬದಿಗೆ ಸರಿಸಲಾಗಿದೆ’ ಎಂದು ಅವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT